ಲಕ್ನೋ: ಉತ್ತರ ಪ್ರದೇಶದ ಮುಸ್ಲಿಂ ಕುಟುಂಬವೊಂದು ಹಿಂದೂ ಹುಡುಗಿಯ ವಿವಾಹವನ್ನು ಆಯೋಜಿಸಲು ತಮ್ಮ ಹೃದಯದ ಜೊತೆಗೆ ತಮ್ಮ ಮನೆಯಲ್ಲಿ ವಿವಾಹ ಮಾಡಲು ಸ್ಥಳಾವಕಾಶ ಮಾಡಿಕೊಟ್ಟ ಹೃದಯಸ್ಪರ್ಶಿ ಘಟನೆಯೊಂದು ನಡೆದಿದೆ.
ವಧು ಪೂಜಾ ಎಂಬಾಕೆಯ ಕುಟುಂಬವು ಏಪ್ರಿಲ್ 22 ಕ್ಕೆ ಮದುವೆಯನ್ನು ನಿಗದಿಪಡಿಸಿತ್ತು ಮತ್ತು ಕೊನೆಯ ಕ್ಷಣದಲ್ಲಿ ಸ್ವಲ್ಪ ಸಹಾಯಕ್ಕಾಗಿ ತಮ್ಮ ನೆರೆಹೊರೆಯವರನ್ನು ಅವಲಂಬಿಸಬೇಕಾಯಿತು. ಆಗ ನೆರವಿಗೆ ಬಂದದ್ದೇ ಮುಸ್ಲಿಂ ಕುಟುಂಬ. ಇಂದು ನಡೆಯುತ್ತಿರುವ ಕೋಮು ದಳ್ಳುರಿಯಲ್ಲಿ ಇವೆರಡು ಕುಟುಂಬಗಳ ಸೌಹಾರ್ದತೆ ಮಾದರಿಯಾಗಿ ನಿಂತಿದೆ.
ಹಣದ ಕೊರತೆಯಿಂದಾಗಿ ಕುಟುಂಬವು ವಧುವಿಗೆ ಮದುವೆ ಮಂಟಪವನ್ನು ಕಾಯ್ದಿರಿಸಲು ಸಾಧ್ಯವಾಗಲಿಲ್ಲ ಮತ್ತು ಕೊನೆಯ ಕ್ಷಣಕ್ಕೆ ಅವರ ಸಹಾಯಕ್ಕೆ ನಿಂತವರೇ ಹಿಂದೂ ಕುಟುಂಬದ ನೆರೆಹೊರೆಯವರಾದ ಪರ್ವೇಜ್. ಇವರು ಯಾವುದೇ ಹಿಂಜರಿಕೆಯಿಲ್ಲದೆ ತನ್ನ ಮನೆಯ ಅಂಗಳದಲ್ಲಿ ಮದುವೆಯನ್ನು ಆಯೋಜಿಸಲು ಮುಂದಾದರು ಎಂದು ವಧುವಿನ ಚಿಕ್ಕಪ್ಪ ರಾಜೇಶ್ ಚೌರಾಸಿಯಾ ಹೇಳಿದ್ದಾರೆ.
ಪರ್ವೇಜ್ ಮತ್ತು ಅವರ ಕುಟುಂಬವು ತಾತ್ಕಾಲಿಕ ಮದುವೆ ಮಂಟಪವನ್ನು ಮಾಡಿ ಮದುವೆಯ ಸ್ಥಳವನ್ನು ಅಲಂಕರಿಸಿದರು ಮತ್ತು ಅತಿಥಿಗಳಿಗೆ ಆಸನ ವ್ಯವಸ್ಥೆಯನ್ನು ಮಾಡಿದರು. ಪರ್ವೇಜ್ ಕುಟುಂಬವು ಭೋಜನವನ್ನೂ ಆಯೋಜಿಸಿತು. ಒಟ್ಟಿನಲ್ಲಿ ಇವರ ಸಹಾಯ ಮದುವೆಗೆ ಬಂದ ಅತಿಥಿಗಳಿಗೆ ಉಡುಗೊರೆಗಳನ್ನು ನೀಡುವವರೆಗೂ ಸಾಗಿತು.
ಔಟ್‌ಲುಕ್‌ನೊಂದಿಗೆ ಮಾತನಾಡಿದ ರಾಜೇಶ್ ಚೌರಾಸಿಯಾ, “ಮದುವೆ ಮೆರವಣಿಗೆ ಹಿಂದಿರುಗುವ ಮೊದಲು ಪರ್ವೇಜ್, ವರನಿಗೆ ಚಿನ್ನದ ಸರವನ್ನು ಉಡುಗೊರೆಯಾಗಿ ನೀಡಿದ್ದಾರೆ. ಪೂಜಾ ಅವರ ಸ್ವಂತ ಮಗಳಂತೆ ನೋಡಿಕೊಂಡರು” ಎಂದು ಹೇಳಿದರು.