ಕೋಮು ಸಾಮರಸ್ಯ ಎತ್ತಿ ಹಿಡಿಯುವ ಘಟನೆ ಒಂದರಲ್ಲಿ ಮುಸ್ಲಿಂ ದಂಪತಿ, ವಿಶ್ವ ಹಿಂದೂ ಪರಿಷತ್ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ನಿರ್ವಹಿಸಲ್ಪಡುವ ದೇಗುಲದ ಆವರಣದಲ್ಲಿ ಇಸ್ಲಾಮಿಕ್ ಸಂಪ್ರದಾಯದಂತೆ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದು, ಮೌಲ್ವಿ ಇವರುಗಳ ವಿವಾಹವನ್ನು ನೆರವೇರಿಸಿದ್ದಾರೆ.
ಹಿಮಾಚಲ ಪ್ರದೇಶದ ಶಿಮ್ಲಾ ಜಿಲ್ಲೆಯ ರಾಂಪುರದಲ್ಲಿ ಈ ವಿವಾಹ ನಡೆದಿದ್ದು, ಠಾಕೂರ್ ಸತ್ಯನಾರಾಯಣ ದೇಗುಲದಲ್ಲಿ ನಡೆದ ಈ ಸಮಾರಂಭದಲ್ಲಿ ಹಿಂದೂ ಹಾಗು ಮುಸ್ಲಿಂ ಸಮುದಾಯದ ಮುಖಂಡರು ಭಾಗವಹಿಸಿ ವಧು – ವರನಿಗೆ ಆಶೀರ್ವದಿಸಿದ್ದಾರೆ.
ಈ ಕುರಿತಂತೆ ಮಾತನಾಡಿದ ಠಾಕೂರ್ ಸತ್ಯನಾರಾಯಣ ದೇವಾಲಯ ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ವಿನಯ್ ಶರ್ಮಾ, ವಿಶ್ವ ಹಿಂದೂ ಪರಿಷತ್ ಈ ದೇಗುಲವನ್ನು ನಿರ್ವಹಿಸುತ್ತಿದೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಕಚೇರಿಯೂ ಇಲ್ಲಿದೆ. ನಾವುಗಳು ಮುಸ್ಲಿಂ ವಿರೋಧಿ ಎಂದು ವೃಥಾ ಆರೋಪಿಸಲಾಗುತ್ತಿದೆ. ಆದರೆ ಸನಾತನ ಧರ್ಮದಂತೆ ನಾವು ಎಲ್ಲರನ್ನೂ ಒಳಗೊಂಡು ಮುಂದೆ ಸಾಗುತ್ತೇವೆ ಎಂದಿದ್ದಾರೆ.
ಇನ್ನು ವಧುವಿನ ತಂದೆ ಮಹೇಂದ್ರ ಸಿಂಗ್ ಮಲ್ಲಿಕ್ ಮಾತನಾಡಿ, ನಮ್ಮ ಪುತ್ರಿಯ ಮದುವೆ ಠಾಕೂರ್ ಸತ್ಯನಾರಾಯಣ ದೇವಾಲಯದ ಆವರಣದಲ್ಲಿ ನೆರವೇರಿದೆ. ಇದಕ್ಕೆ ಹಿಂದೂ ಹಾಗೂ ಮುಸ್ಲಿಂ ಸಮುದಾಯದವರು ಸಹಕರಿಸಿದ್ದಾರೆ. ಈ ಮದುವೆಯ ಮೂಲಕ ನಾವುಗಳು ಭ್ರಾತೃತ್ವದ ಸಂದೇಶವನ್ನು ಸಾರಿದ್ದೇವೆ ಎಂದು ಹೇಳಿದ್ದಾರೆ. ನವದಂಪತಿ ಬಹು ರಾಷ್ಟ್ರೀಯ ಕಂಪನಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಲಾಗಿದೆ.