ಮಧ್ಯಪ್ರದೇಶದ ನರಸಿಂಗ್‌ಪುರದಲ್ಲಿ ಮುಸ್ಲಿಂ ಯುವಕನೊಬ್ಬ ಹಿಂದೂ ಯುವತಿಯನ್ನು ಮದುವೆಯಾಗಲು ತನ್ನ ಧರ್ಮವನ್ನ ಬದಲಾಯಿಸಿಕೊಂಡಿದ್ದಾರೆ. ನನ್ನ ತಂದೆ ಕೂಡ ಅವರು ಮದುವೆಯಾಗುವಾಗ ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದರು. ಹೀಗಾಗಿ ನಾನೇಕೆ ನನ್ನ ಮದುವೆಗಾಗಿ ಧರ್ಮ ಬದಲಾಯಿಸಿಕೊಳ್ಳಬಾರದೆಂದು ನಿರ್ಧರಿಸಿದೆನೆಂದು ವರ ಹೇಳಿದ್ದಾರೆ.
ನರಸಿಂಗ್‌ಪುರ ಜಿಲ್ಲೆಯ ಕರೇಲಿಯಲ್ಲಿರುವ ರಾಮಮಂದಿರದಲ್ಲಿ ವಿವಾಹವನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು. ಮದುವೆಯಲ್ಲಿ ನವಜೋಡಿಯ ಕೆಲವು ಸ್ನೇಹಿತರು ಮಾತ್ರ ಹಾಜರಿದ್ದರು. ವರ ಫಾಜಿಲ್ ಖಾನ್ ತನ್ನ ಧರ್ಮವನ್ನು ಹಿಂದೂ ಧರ್ಮಕ್ಕೆ ಬದಲಾಯಿಸಿಕೊಂಡಿದ್ದು ಇದೀಗ ಅವರನ್ನು ಅಮನ್ ರೈ ಎಂದು ಕರೆಯಲಾಗುತ್ತದೆ.
ಕುತೂಹಲಕಾರಿಯಾಗಿ ಸಂಗತಿಯೆಂದರೆ ಮೂಲತಃ ಹಿಂದೂ ಆಗಿದ್ದ ವರನ ತಂದೆ, ಅವರ ಮದುವೆ ಸಮಯದಲ್ಲಿ ಮುಸ್ಲಿಂ ಮಹಿಳೆಯನ್ನು ಮದುವೆಯಾದ ಬಳಿಕ ಇಸ್ಲಾಂಗೆ ಮತಾಂತರಗೊಂಡಿದ್ದರು.
ಅಮನ್ ರೈ ಸೋನಾಲಿಯನ್ನು ಪ್ರೀತಿಸುತ್ತಿದ್ದರು. ಅವಳನ್ನು ಮದುವೆಯಾಗಲು ನಿರ್ಧರಿಸಿದರು. ಹೀಗಾಗಿ “ನನ್ನ ತಂದೆ ತನ್ನ ಹೆಂಡತಿಗಾಗಿ ಧರ್ಮವನ್ನು ಬದಲಾಯಿಸಿದರು, ನಾನು ನನ್ನ ಹೆಂಡತಿಗಾಗಿ ನನ್ನ ಧರ್ಮವನ್ನು ಬದಲಾಯಿಸಿದ್ದೇನೆ” ಎಂದು ಅಮನ್ ಹೇಳಿದರು.
ಅಮನ್ ಅವರ ಇಬ್ಬರು ಹಿಂದೂ ಸ್ನೇಹಿತರು ಅವರ ಮದುವೆಗೆ ಸಾಕ್ಷಿಯಾದರು. ‘ಜೈ ಶ್ರೀ ರಾಮ್’ ಘೋಷಣೆಗಳ ನಡುವೆ ಅಮನ್ ಹಿಂದೂ ಧರ್ಮಕ್ಕೆ ಮತಾಂತರಗೊಂಡ ನಂತರ ನವಜೋಡಿ ವಿವಾಹವಾದರು.