
ಫೆಬ್ರವರಿ 22 ರಂದು ಕನೆಕ್ಟಿಕಟ್‌ನ ಮೊಹೆಗನ್ ಸನ್‌ನಲ್ಲಿ ನಡೆದ ಸಂಗೀತ ಕಾರ್ಯಕ್ರಮದ ವೇಳೆ ಬಿಲ್ಲಿ ಜೋಯಲ್ ವೇದಿಕೆ ಮೇಲೆ ಬಿದ್ದು ಎದ್ದಿದ್ದಾರೆ. 75 ವರ್ಷದ ದಂತಕಥೆ 1980 ರ ಹಿಟ್ ಹಾಡು “ಇಟ್ಸ್ ಸ್ಟಿಲ್ ರಾಕ್ ಅಂಡ್ ರೋಲ್ ಟು ಮಿ” ಅನ್ನು ಪ್ರದರ್ಶಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಸಮತೋಲನ ತಪ್ಪಿ ಬಿದ್ದಿದ್ದಾರೆ. ಅಭಿಮಾನಿಗಳಿಗೆ ಇದು ಆತಂಕದ ಕ್ಷಣವಾಗಿತ್ತು.
ಅಭಿಮಾನಿಯೊಬ್ಬರು ಸೆರೆಹಿಡಿದ ಟಿಕ್‌ಟಾಕ್ ವೀಡಿಯೊದಲ್ಲಿ, ಬಿಲ್ಲಿ ಜೋಯಲ್ ಮೈಕ್ರೊಫೋನ್ ಸ್ಟ್ಯಾಂಡ್ ಅನ್ನು ತಿರುಗಿಸಿ ಪ್ರೇಕ್ಷಕರ ಕಡೆಗೆ ಎಸೆಯುವ ಮೊದಲು ಸಮತೋಲನ ತಪ್ಪಿ ಬಿದ್ದಿದ್ದಾರೆ. ನಂತರ ಅವರು ತಮ್ಮ ಕಾಲುಗಳನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸುವಾಗ ಬಿದ್ದು, ಬೆನ್ನಿನ ಮೇಲೆ ಉರುಳಿದ್ದಾರೆ.
ಬಿದ್ದರೂ ಸಹ, ಜೋಯಲ್ ತಕ್ಷಣವೇ ಎದ್ದು ತಮ್ಮ ಪ್ರದರ್ಶನವನ್ನು ಮುಂದುವರೆಸಿದ್ದು, ಹಾಡನ್ನು ಪೂರ್ಣಗೊಳಿಸಿದ್ದಾರೆ ಮತ್ತು ಕಾರ್ಯಕ್ರಮ ಮುಗಿಸುವ ಮೊದಲು ಇನ್ನೊಂದು ಹಾಡನ್ನು ನುಡಿಸಿದ್ದಾರೆ. ಬಿಲ್ಲಿ ಜೋಯಲ್ ಅವರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ತೋರುತ್ತಿದ್ದರೂ, ಅವರು ಬಿದ್ದಿದ್ದು ಅಭಿಮಾನಿಗಳನ್ನು ಚಿಂತೆಗೀಡು ಮಾಡಿದೆ.
ಬಿಲ್ಲಿ ಜೋಯಲ್ ಅವರು ಜನವರಿಯಲ್ಲಿ ಫ್ಲೋರಿಡಾ ಸಂಗೀತ ಕಾರ್ಯಕ್ರಮವನ್ನು ರದ್ದುಗೊಳಿಸಿದ ನಂತರ ಈ ಘಟನೆ ನಡೆದಿದೆ. “ದಿ ಪಿಯಾನೋ ಮ್ಯಾನ್” ನವೆಂಬರ್ 2025 ರವರೆಗೆ ತಮ್ಮ ಪ್ರವಾಸವನ್ನು ಮುಂದುವರೆಸಲಿದ್ದಾರೆ.