ಆತ ಸೋಲರಿಯದ ಛಲಗಾರ. ಬಾಕ್ಸಿಂಗ್ ಅಖಾಡಕ್ಕೆ ಇಳಿದರೆ ಸಾಕು, ಎದುರಿಗಿದ್ದ ಫೈಟರ್ ತಣ್ಣಗೆ ಬೆವತು ಬಿಡ್ತಿದ್ದ. ಆದರೆ ಆ ಟಫ್ ಫೈಟರ್ ವಿಧಿಯಾಟದ ಮುಂದೆ ಸೋಲೋಪ್ಪಿಕೊಂಡಿದ್ದ ಆ ಬಾಕ್ಸಿಂಗ್ ಆಟಗಾರನ ಹೆಸರು ಮುಸಾ ಯಮಕ್.
ಮುಸಾ ಯಮಕ್, 38 ವರ್ಷದ ಜರ್ಮನಿಯ ಪ್ರಸಿದ್ಧ ಬಾಕ್ಸಿಂಗ್ ಆಟಗಾರ. ಬಾಕ್ಸಿಂಗ್ ಆಡೋದಕ್ಕಂತ ಅಖಾಡಕ್ಕೆ ಇಳಿದ ಈ ಆಟಗಾರ, ಆಟದ ಮಧ್ಯದಲ್ಲಿಯೇ ಹೃದಯಾಘಾತಕ್ಕೆ ಒಳಗಾಗಿ ಬಾಕ್ಸಿಂಗ್ ರಿಂಗ್ ನಲ್ಲೇ ಕೊನೆಯುಸಿರೆಳೆದಿದ್ದಾರೆ. ಈ ಆಘಾತಕಾರಿ ಘಟನೆ ಮ್ಯೂನಿಚ್ ನಲ್ಲಿ ಸಂಭವಿಸಿದೆ. ಬಾಕ್ಸಿಂಗ್ ರಿಂಗ್ನಲ್ಲಿ ಆಟದ ಮಧ್ಯೆಯೇ ಈ ರೀತಿ ಸಾವನ್ನಪ್ಪಿರೋ ಘಟನೆ ನಡೆದಿರೋದು ಎರಡನೇ ಬಾರಿ.
ಅಂದು ಎಂದಿನಂತೆ ಬಾಕ್ಸಿಂಗ್ ಪಂದ್ಯ ಏರ್ಪಡಿಸಲಾಗಿತ್ತು. ಆ ಪಂದ್ಯ ನೇರ ಪ್ರಸಾರ ಕೂಡಾ ಮಾಡಲಾಗಿತ್ತು. ಉಗಾಂಡಾದ ಸ್ಫರ್ಧಿ ಹಮ್ಜಾವಂಡೇರಾ ವಿರುದ್ಧ ಮುಸಾ ಯಮಕ್ ಆಡುತ್ತಿದ್ದರು. ಎರಡನೇ ಸುತ್ತಿನ ತನಕ ಆಟ ರೋಚಕವಾಗಿಯೇ ಇತ್ತು. ಇನ್ನೇನು ಮೂರನೇ ಸುತ್ತು ಆರಂಭವಾಗಿತ್ತು. ಆ ಮೂರನೇ ಸುತ್ತು ಶುರುವಾಗಿದ್ದೇ ತಡ ಮುಸಾ ಯಮಕ್ ಧಿಡೀರನೇ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಸ್ಥಳದಲ್ಲಿದ್ದ ವೈದ್ಯರು ಪರೀಕ್ಷೆ ಮಾಡಿದ್ದಾರೆ. ಆಸ್ಪತ್ರೆಗೂ ದಾಖಲಿಸಲಾಗಿದೆ. ಆದರೂ ಚಿಕಿತ್ಸೆ ಫಲಕಾರಿಯಾಗದೇ ಮುಸಾ ಅವರು ಮೃತಪಟ್ಟಿದ್ದಾರೆ.
ಯುರೋಪಿಯನ್ ಮತ್ತು ಏಷ್ಯನ್ ಚಾಂಪಿಯನ್ ಆಗಿದ್ದ ಮುಸಾ ಯಮಕ್ ಅತ್ಯಂತ ಚಿಕ್ಕ ವಯಸ್ಸಿನಲ್ಲೇ(38) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಎಂದು ಟರ್ಕಿ ಅಧಿಕಾರಿಗಳು ತಮ್ಮ ಟ್ವಿಟರ್ನಲ್ಲಿ ಬರೆದುಕೊಂಡು ಸಂತಾಪ ವ್ಯಕ್ತಪಡಿಸಿದ್ದಾರೆ.