ಚಿತ್ರದುರ್ಗ: ಇದು ದೊಡ್ಡ ಮಟ್ಟದ ಕಿರುಕುಳ ಮತ್ತು ಪಿತೂರಿಯಾಗಿದೆ ಎಂದು ಮುರುಘಾ ಶರಣರು ಹೇಳಿದ್ದಾರೆ. ತಮ್ಮ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಅವರು ಭಕ್ತರೊಂದಿಗಿನ ಸಭೆಯಲ್ಲಿ ಮಾತನಾಡಿದ್ದಾರೆ.
ಗಾಳಿ ಪಟ ಕೆಳಗೆ ಇದ್ದಾಗ ಗಾಳಿಯ ಹೊಡೆತ ಗೊತ್ತಾಗಲಿಲ್ಲ. ಸಣ್ಣವರಿಗೆ ಸಣ್ಣ ಕುತ್ತು, ದೊಡ್ಡವರಿಗೆ ದೊಡ್ಡ ಕುತ್ತು ಬಂದಿದೆ ಎಂದು ಮಠದಲ್ಲಿ ನಡೆದ ಸಭೆಯಲ್ಲಿ ಮುರುಘಾ ಶ್ರೀಗಳು ಹೇಳಿದ್ದಾರೆ.
ನಮ್ಮ ವಿರುದ್ಧ ಪಿತೂರಿ, ಒಳಸಂಚು ಮಾಡಿದ್ದಾರೆ. ಇದರ ಬಗ್ಗೆ ಸಮರಕ್ಕೂ ಸಿದ್ಧ ಎಂದು ಶ್ರೀಗಳು ಹೇಳಿದ್ದಾರೆ ಯಾವ ಸಮಸ್ಯೆ ಶಾಶ್ವತ ಅಲ್ಲ, ಯಾವ ಸುಖವೂ ಶಾಶ್ವತ ಅಲ್ಲ, ಎಲ್ಲವೂ ತಾತ್ಕಾಲಿಕ. ಎಲ್ಲವನ್ನು ಕಾಲವೇ ನಿರ್ಣಯಮಾಡುತ್ತದೆ. ಸಾಧ್ಯವಾದರೆ ಸಮಸ್ಯೆ ಪರಿಹರಿಸೋಣ, ಇಲ್ಲವೇ ಹೋರಾಟ ನಡೆಸೋಣ. ಯಾರೂ ಕೂಡ ದುಃಖ ಮಾಡಿಕೊಳ್ಳಬೇಡಿ ಎಂದು ಶರಣರು ಹೇಳಿದ್ದಾರೆ.
ಯೇಸು ಕ್ರಿಸ್ತನಿಗೆ, ಪೈಗಂಬರ್ ಗೆ ಟಾರ್ಚರ್ ಮಾಡಿದವರು ಅದೇ ಧರ್ಮದವರು. ಗೌತಮ ಬುದ್ಧನಿಗೆ ಕೊನೆಗಳಿಗೆಯಲ್ಲಿ ಮಾಂಸದ ರಸವನ್ನು ಕುಡಿಸಿದವರು ಬೇರೆಯವರಲ್ಲ ಎಂದರು.
ಎಲ್ಲಾ ಸಮಾಜ ಸುಧಾರಕರು ಇಂತಹ ಸಂಕಷ್ಟ ಎದುರಿಸಿದ್ದಾರೆ. ಈ ರೀತಿ ಬೆಳವಣಿಗೆಯಿಂದ ತುಂಬಾ ನೋವಾಗಿದೆ. ಭಕ್ತರಿಗೂ ನೋವಾಗಿದೆ. ಮುರುಘಾ ಮಠದಲ್ಲಿ ಅಧಿಕಾರಕ್ಕಾಗಿ ಸಂಘರ್ಷ ನಡೆಯುತ್ತಿದೆ. ಆದರ್ಶಕ್ಕಾಗಿ ಸಂಘರ್ಷ ನಡೆಯುತ್ತಿಲ್ಲ. ಮುರುಘಾ ಮಠವನ್ನು ಭಕ್ತರು ಬಂದು ನೋಡುವಂತೆ ಮಾಡಿದ್ದೇವೆ. ಇಂತಹ ಅನಾರೋಗ್ಯಕರ ಬ್ಲಾಕ್ ಮೇಲ್, ಅಧಿಕಾರ ಹಿಡಿಯಲು ಕುತಂತ್ರ ಸಹಿಸಲ್ಲ. ನಾವು ಸಂಧಾನಕ್ಕೂ ಸಿದ್ಧ, ಸಂಧಾನ ಫೇಲಾದರೆ ಸಮರಕ್ಕೂ ಸಿದ್ಧವಾಗಿದ್ದೇವೆ. ಮಠದಲ್ಲಿ ಇದ್ದವರೇ ಮಾಡಿದ ಪಿತೂರಿ, ಸಂಚು ಇದಾಗಿದೆ ಎಂದರು.
ಮುರಘಾ ಮಠದ ಮೇಲಿನ ಅಭಿಮಾನ ಬಡಿದೆಬ್ಬಿಸಲು ಮಾಡಿದ ಕೆಲಸ ಇದು, ಅಭಿಮಾನ ಜಾಗೃತ ಆಗುತ್ತಿದೆ. ಇಂತಹ ಎರಡು ಮೂರು ಸನ್ನಿವೇಶಗಳನ್ನು ಕಾನೂನು ಮೂಲಕ ಎದುರಿಸಿದ್ದೇವೆ. ಎಲ್ಲದಕ್ಕೂ ಪರಿಹಾರ ಇದೆ. ನೋವು ಮಾಡಿಕೊಳ್ಳಬೇಡಿ. ನನ್ನ ನೋವಿನ ಜೊತೆ ನೀವಿರುವುದೇ ದೊಡ್ಡ ಧೈರ್ಯ. ಕೆಟ್ಟವರಿಗೆ ನೋವಾದಾಗ ಜನ ಸೇರಲ್ಲ. ಒಳ್ಳೆಯವರಿಗೆ ನೋವಾದಾಗ ಜನ ಈ ರೀತಿ ಸೇರುತ್ತಾರೆ ಎಂಬುದಕ್ಕೆ ನೀವೇ ಸಾಕ್ಷಿ. ನಿಮ್ಮೊಂದಿಗೆ ನಾವು ನಮ್ಮೊಂದಿಗೆ ನೀವಿದ್ದೇವೆ. ಈ ಮಠವನ್ನು ಸರ್ವ ಜನಾಂಗದ ಮಠವಾಗಿ ಮುನ್ನಡೆಸಿಕೊಂಡು ಹೋಗೋಣ ಎಂದರು.