ಚಿತ್ರದುರ್ಗ: ಹಾಸ್ಟೆಲ್ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಮುರುಘಾ ಶರಣರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಶನಿವಾರ ಚಿತ್ರದುರ್ಗದ ಮುರುಘಾ ಮಠದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಮಠದ ಭಕ್ತರು, ಹಿತೈಷಿಗಳು, ಸಲಹಾ ಮಂಡಳಿ ಸದಸ್ಯರು, ಸಂಘ ಸಂಸ್ಥೆಗಳ ಪ್ರಮುಖರು, ಮಠಕ್ಕೆ ಭೇಟಿ ನೀಡಿ ಸ್ವಾಮೀಜಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಶಾಸಕರಾದ ಜಿ.ಹೆಚ್. ತಿಪ್ಪಾರೆಡ್ಡಿ, ಎಂ. ಚಂದ್ರಪ್ಪ, ಜೆಡಿಎಸ್ ಮುಖಂಡ ಕೆ.ಸಿ. ವೀರೇಂದ್ರ ಸೇರಿದಂತೆ ಹಲವು ಮುಖಂಡರು ಹಾಗೂ ವಿವಿಧ ಮಠಾಧೀಶರು ಮುರುಘಾ ಶರಣರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಮುರುಘಾ ಮಠಕ್ಕೆ ಭವ್ಯ ಇತಿಹಾಸ ಇದೆ. ಶತಮಾನಗಳ ಕಾಲ ಸೇವೆ ಮಾಡಿದ ಪರಂಪರೆಯನ್ನು ಮುರುಘಾ ಮಠ ಹೊಂದಿದೆ. ಕಾನೂನು ಕ್ರಮಕ್ಕೆ ವಿರೋಧವಿಲ್ಲ. ಆದರೆ, ದೂರಿನ ಸತ್ಯಾಸತ್ಯತೆ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಭಕ್ತರ ಭಾವನೆಗಳಿಗೆ ಧಕ್ಕೆ ತರಬಾರದು. ಸರ್ಕಾರ ಮತ್ತು ಪೊಲೀಸ್ ಇಲಾಖೆ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಗಣ್ಯರು ಹೇಳಿದ್ದಾರೆ. ಮುರುಘಾ ಶರಣರಿಗೆ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಲು ಗಣ್ಯರು ಸಲಹೆ ನೀಡಿದ್ದು, ಜಾಮೀನು ಕೋರಿ ಅರ್ಜಿ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ.
ಇನ್ನು ಸ್ವಾಮೀಜಿಗಳು ಭಕ್ತರೊಂದಿಗಿನ ಸಭೆಯಲ್ಲಿ ಇದು ದೊಡ್ಡ ಮಟ್ಟದ ಕಿರುಕುಳ ಮತ್ತು ಪಿತೂರಿಯಾಗಿದೆ. ಗಾಳಿ ಪಟ ಕೆಳಗೆ ಇದ್ದಾಗ ಗಾಳಿಯ ಹೊಡೆತ ಗೊತ್ತಾಗಲಿಲ್ಲ. ನಮ್ಮ ವಿರುದ್ಧ ಪಿತೂರಿ, ಒಳಸಂಚು ಮಾಡಿದ್ದಾರೆ. ಇದರ ಬಗ್ಗೆ ಸಮರಕ್ಕೂ ಸಿದ್ಧ. ಯಾವ ಸಮಸ್ಯೆ ಶಾಶ್ವತ ಅಲ್ಲ, ಯಾವ ಸುಖವೂ ಶಾಶ್ವರ ಅಲ್ಲ, ಎಲ್ಲವೂ ತಾತ್ಕಾಲಿಕ. ಎಲ್ಲವನ್ನು ಕಾಲವೇ ನಿರ್ಣಯಮಾಡುತ್ತದೆ. ಸಾಧ್ಯವಾದರೆ ಸಮಸ್ಯೆ ಪರಿಹರಿಸೋಣ, ಇಲ್ಲವೇ ಹೋರಾಟ ನಡೆಸೋಣ. ಯಾರೂ ಕೂಡ ದುಃಖ ಮಾಡಿಕೊಳ್ಳಬೇಡಿ ಎಂದು ಹೇಳಿದ್ದಾರೆ.
ಮುರುಘಾ ಮಠದಲ್ಲಿ ಅಧಿಕಾರಕ್ಕಾಗಿ ಸಂಘರ್ಷ ನಡೆಯುತ್ತಿದೆ. ಆದರ್ಶಕ್ಕಾಗಿ ಸಂಘರ್ಷ ನಡೆಯುತ್ತಿಲ್ಲ. ಇಂತಹ ಅನಾರೋಗ್ಯಕರ ಬ್ಲಾಕ್ ಮೇಲ್, ಅಧಿಕಾರ ಹಿಡಿಯಲು ಕುತಂತ್ರ ಸಹಿಸಲ್ಲ. ನಾವು ಸಂಧಾನಕ್ಕೂ ಸಿದ್ಧ, ಸಂಧಾನ ಫೇಲಾದರೆ ಸಮರಕ್ಕೂ ಸಿದ್ಧವಾಗಿದ್ದೇವೆ. ಮಠದಲ್ಲಿ ಇದ್ದವರೇ ಮಾಡಿದ ಪಿತೂರಿ, ಸಂಚು ಇದಾಗಿದೆ ಎಂದು ದೂರಿದ್ದಾರೆ.