ಚಿತ್ರದುರ್ಗ: ಪ್ರೌಢಶಾಲೆ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬಂಧಿತರಾಗಿರುವ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಪೀಠ ತ್ಯಾಗ ಮಾಡದಿರುವ ಹಿನ್ನೆಲೆಯಲ್ಲಿ ಸೆ. 29 ರಂದು ವೀರಶೈವ ಲಿಂಗಾಯತ ಸಮಾಜದ ಸಭೆ ಕರೆಯಲಾಗಿದೆ.
ಚಿತ್ರದುರ್ಗ ಹೊರ ವಲಯದ ಸಿಬಾರದಲ್ಲಿರುವ ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಸ್ಮಾರಕ ಆವರಣದಲ್ಲಿ ಮಾಜಿ ಸಚಿವ ಹೆಚ್. ಏಕಾಂತಯ್ಯ ನೇತೃತ್ವದಲ್ಲಿ ಸೆ. 29 ರಂದು ಬೆಳಗ್ಗೆ 11:30ಕ್ಕೆ ಸಭೆ ನಡೆಯಲಿದೆ.
ಐತಿಹಾಸಿಕ, ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಮುರುಘರಾಜೇಂದ್ರ ಮಠ ಹೆಸರಾಗಿದ್ದು, ಪೀಠಾಧ್ಯಕ್ಷ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಗಂಭೀರ ಆರೋಪ ಎದುರಾಗಿದೆ. ಮಠದ ಗೌರವ ಹಾಗೂ ಪ್ರತಿಷ್ಠೆ ಕಾಪಾಡುವ ನಿಟ್ಟಿನಲ್ಲಿ ಸ್ವಾಮೀಜಿ ಪೀಠ ತ್ಯಾಗ ಮಾಡಿಲ್ಲ. ಮಠದ ಸಂಪ್ರದಾಯ ಪರಂಪರೆ ನಿರ್ವಹಿಸಲು ಸಾಧ್ಯವಾಗದಿರುವುದು ದುರದೃಷ್ಟಕರ ಎಂದು ಸಮಾಜ ಬಾಂಧವರಿಗೆ ಕಳುಹಿಸಿದ ಪತ್ರದಲ್ಲಿ ತಿಳಿಸಲಾಗಿದ್ದು, ಸಭೆಗೆ ಆಗಮಿಸಿ ಮಠದ ಮುಂದಿನ ಹಾದಿಯನ್ನು ರೂಪಿಸಲು ಸಲಹೆ ನೀಡವಂತೆ ಪತ್ರದಲ್ಲಿ ಕೋರಲಾಗಿದೆ.