ಚಿತ್ರದುರ್ಗ: ಚಿತ್ರದುರ್ಗದ ಮುರುಘಾ ಸ್ವಾಮಿಜಿ ವಿರುದ್ಧ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆಯಲ್ಲಿ ಸೌಭಾಗ್ಯ ಬಸವರಾಜನ್ ಅವರನ್ನು ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮುರುಘಾ ಮಠದ ಮಾಜಿ ಆಡಳಿತಾಧಿಕಾರಿ ಹಾಗೂ ಮಾಜಿ ಶಾಸಕ ಬಸವರಾಜನ್ ಪತ್ನಿ ಸೌಭಾಗ್ಯ ಬಸವರಾಜನ್ ಅವರನ್ನು ವಶಕ್ಕೆ ಪಡೆದು ಮಹಿಳಾ ಸಾಂತ್ವನ ಕೇಂದ್ರಕ್ಕೆ ಬಿಡಲಾಗಿದೆ. ಇಂದು ಅಧಿಕೃತವಾಗಿ ಸೌಭಾಗ್ಯ ಬಸವರಾಜನ್ ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಗುವುದು.
ನವೆಂಬರ್ 9 ರಂದು ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಮುರುಘಾ ಮಠದ ಉಸ್ತುವಾರಿ ಬಸವಪ್ರಭುಶ್ರೀ ದೂರು ನೀಡಿದ್ದರು. ಸ್ವಾಮೀಜಿ ವಿರುದ್ಧ ಸುಳ್ಳು ಕೇಸ್ ದಾಖಲಿಸಲು ಪಿತೂರಿ ನಡೆದಿದೆ ಎಂದು ಅವರು ದೂರು ನೀಡಿದ್ದರು.
ಸಂತ್ರಸ್ತೆಗೆ ಮಠದ ಶಾಲಾ ಶಿಕ್ಷಕನಾಗಿದ್ದ ಬಸವರಾಜೇಂದ್ರ ಪ್ರಚೋದನೆ ನೀಡಿದ ಆರೋಪ ಕೇಳಿ ಬಂದಿದ್ದು, ಈ ಕುರಿತಾದ ಆಡಿಯೋ ವೈರಲ್ ಆಗಿತ್ತು. ನವೆಂಬರ್ 10 ರಂದು ಬಸವರಾಜೇಂದ್ರನನ್ನು ಬಂಧಿಸಿದ್ದ ಪೊಲೀಸರು ವಿಚಾರಣೆ ನಡೆಸಿದ್ದರು. ನವೆಂಬರ್ 10ರಂದು ರಾತ್ರಿ ಮಾಜಿ ಶಾಸಕ ಬಸವರಾಜನ್ ಅವರನ್ನು ಬಂಧಿಸಲಾಗಿತ್ತು. ಪತಿ ಬಂಧನವಾದ ನಂತರ ಪತ್ನಿ ಸೌಭಾಗ್ಯ ಬಸವರಾಜನ್ ನಾಪತ್ತೆಯಾಗಿದ್ದರು.