ಚಿತ್ರದುರ್ಗ: ಮುರುಘಾ ಮಠದ ಅಧೀನ ಸಂಸ್ಥೆ ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಉದ್ಯಮಿ ಭರತ್ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ.
ವಿದೇಶದಲ್ಲಿ ಕಾರ್ಯನಿರ್ವಹಿಸಿರುವ ಚಿತ್ರದುರ್ಗ ಮೂಲದ ಉದ್ಯಮಿ ಭರತ್ ಕುಮಾರ್ ಮುರುಘಾ ಮಠದ ಸಭಾಂಗಣದಲ್ಲಿ ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಮುರುಘಾ ಮಠದ ಪೂಜಾ ಕೈಂಕರ್ಯ ಉಸ್ತುವಾರಿ ಬಸವಪ್ರಭು ಸ್ವಾಮೀಜಿ, ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿ ಎಸ್.ಬಿ. ವಸ್ತ್ರದಮಠ ಮೊದಲಾದವರು ಈ ಸಂದರ್ಭದಲ್ಲಿ ಇದ್ದರು.
ಸ್ವಾಮೀಜಿ ವಜಾಗೊಳಿಸಲು ಹೆಚ್ಚಿದ ಒತ್ತಡ
ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿ ಪೋಕ್ಸೋ ಪ್ರಕರಣದಲ್ಲಿ ಜೈಲು ಪಾಲಾದ ಮುರುಘಾ ಸ್ವಾಮೀಜಿಯನ್ನು ಮುರುಘಾ ಮಠದ ಪೀಠಾಧ್ಯಕ್ಷ ಸ್ಥಾನದಿಂದ ವಜಾಗೊಳಿಸಲು ಒತ್ತಡ ಹೆಚ್ಚಾಗಿದೆ. ಮಾಜಿ ಸಚಿವ ಹೆಚ್. ಏಕಾಂತಯ್ಯ ನೇತೃತ್ವದಲ್ಲಿ ಚಿತ್ರದುರ್ಗ ತಾಲೂಕಿನ ಶಿಬಾರ ಬಳಿಯ ಎಸ್. ನಿಜಲಿಂಗಪ್ಪ ಸ್ಮಾರಕ ಆವರಣದಲ್ಲಿ ಇಂದು ವೀರಶೈವ ಲಿಂಗಾಯಿತ ಸಮಾಜದ ಸಭೆ ನಡೆಸಲಾಗುವುದು.
ಪಿತೂರಿ ಕೇಸ್ ನಲ್ಲಿ ಮೂರನೇ ಆರೋಪಿ ಅರೆಸ್ಟ್
ಮುರುಘಾ ಸ್ವಾಮೀಜಿ ವಿರುದ್ಧ ಸುಳ್ಳು ದೂರು ದಾಖಲಿಸಲು ಪಿತೂರಿ ಕೇಸ್ ಗೆ ಸಂಬಂಧಿಸಿದಂತೆ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಮೂರನೇ ಆರೋಪಿಯಾಗಿರುವ ಫೋಟೋ ಗ್ರಾಫರ್ ಮಯೂರ್ ನನ್ನು ಬಂಧಿಸಿದ್ದಾರೆ. ಇದರೊಂದಿಗೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ಮಠದ ಮಾಜಿ ಆಡಳಿತಾಧಿಕಾರಿಯಾಗಿರುವ ಮಾಜಿ ಶಾಸಕ ಎಸ್.ಕೆ. ಬಸವರಾಜನ್ ಮತ್ತು ಮಠದ ಶಾಲಾ ಶಿಕ್ಷಕನಾಗಿದ್ದ ಬಸವರಾಜೇಂದ್ರ ಅವರನ್ನು ಈ ಮೊದಲು ಬಂಧಿಸಿದ್ದು, ಇವರು ನ್ಯಾಯಾಂಗ ಬಂದನದಲ್ಲಿದ್ದಾರೆ.