ನವದೆಹಲಿ: ಪೋಕ್ಸೋ ಪ್ರಕರಣದಲ್ಲಿ ಬಂಧಿತರಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಚಿತ್ರದುರ್ಗದ ಮುರುಘಾ ಮಠದ ಡಾ.ಶಿವಮೂರ್ತಿ ಶರಣರ ಜಾಮೀನು ರದ್ದು ಮಾಡಲಾಗಿದೆ.
ಮುರುಘಾ ಶರಣರ ಜಾಮೀನು ರದ್ದು ಮಾಡಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದ್ದು, ಮತ್ತೆ ಜೈಲಿಗೆ ಹೋಗುವಂತೆ ಸೂಚನೆ ನೀಡಿದೆ. 4 ತಿಂಗಳ ಕಾಲ ಜಾಮೀನು ರದ್ದು ಮಾಡಿ ಆದೇಶ ಹೊರಡಿಸಿದೆ.
4 ವಾರಗಳಲ್ಲಿ ತನಿಖೆ ಪೂರ್ಣಗೊಳಿಸಿ ಚಾರ್ಜ್ ಶೀಟ್ ಸಲ್ಲಿಸುವಂತೆ ತನಿಖಾಧಿಕಾರಿಗೆ ಸೂಚಿಸಿದೆ. ನಾಲ್ಕು ವಾರಗಳಲ್ಲಿ ತನಿಖೆ ಪೂರ್ಣವಾಗದಿದ್ದರೆ ಕೋರ್ಟ್ ಗಮನಕ್ಕೆ ತರಬೇಕು. ಮತ್ತೆ 2 ವಾರ ನ್ಯಾಯಾಂಗ ಬಂಧನ ವಿಸ್ತರಿಸಬಹುದು ಎಂದು ತಿಳಿಸಿದೆ.
ಒಂದು ವಾರದಲ್ಲಿ ಮುರುಘಾ ಶ್ರೀ ನ್ಯಾಯಾಂಗ ಬಂಧನಕ್ಕೆ ತೆರಳಬೇಕು. ಸಂತ್ರಸ್ತ ಮಕ್ಕಳನ್ನು ವಿಶೇಷ ಕೋರ್ಟ್ ನಲ್ಲಿ ವಿಚಾರಣೆ ನಡೆಸುವಂತೆ ಸೂಚನೆ ನೀಡಿದೆ.
ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನಕ್ಕೀಡಾಗಿದ್ದ ಮುರುಘಾ ಶ್ರೀಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಇದನ್ನು ಪ್ರಶ್ನಿಸಿ ಸಂತ್ರಸ್ತರ ಪರ ವಕೀಲರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.