ಬೆಂಗಳೂರು: ಪೋಕ್ಸೋ ಪ್ರಕರಣದಲ್ಲಿ ಷರತ್ತುಬದ್ಧ ಜಾಮೀನು ಪಡೆದು ಬಿಡುಗಡೆಯಾಗಿರುವ ಮುರುಘಾ ಶರಣರು ಮುರುಘಾ ಮಠದ ಆಡಳಿತಾಧಿಕಾರ ಮರಳಿ ಪಡೆದಿದ್ದಾರೆ.
ಮಠದ ಉಸ್ತುವಾರಿ ಬಸವ ಪ್ರಭು ಸ್ವಾಮೀಜಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ನ್ಯಾಯಾಧೀಶರಾದ ಕೆ.ಪಿ. ಗೀತಾ ಅವರಿಂದ ಆದೇಶ ಬಂದಿದ್ದು, ಮುಂದಿನ ಆಡಳಿತವನ್ನು ಮುರುಘಾ ಶರಣರು ನಡೆಸಿಕೊಂಡು ಹೋಗಲಿದ್ದಾರೆ. ಭಕ್ತರು, ಸಿಬ್ಬಂದಿ ಸಹಕಾರ ನೀಡಬೇಕು ಎಂದು ತಿಳಿಸಿದ್ದಾರೆ.
2021ರ ಸೆಪ್ಟೆಂಬರ್ 1ರಂದು ಪೋಕ್ಸೋ ಪ್ರಕರಣದಲ್ಲಿ ಮುರುಗಾ ಶರಣರ ಬಂಧನವಾಗಿತ್ತು. ಮಠದ ಆಡಳಿತ ನಿರ್ವಹಣೆಗೆ ನಿವೃತ್ತ ಐಎಎಸ್ ಅಧಿಕಾರಿ ವಸ್ತ್ರದ್ ಅವರನ್ನು ನೇಮಿಸಲಾಗಿತ್ತು. ನೇಮಕ ಪ್ರಶ್ನಿಸಿ ಮಠದ ವಕೀಲರು ಹೈಕೋರ್ಟ್ ಮೊರೆ ಹೋಗಿದ್ದರಿಂದ ಆಡಳಿತ ಅಧಿಕಾರಿ ನೇಮಕವನ್ನು ಹೈಕೋರ್ಟ್ ರದ್ದು ಪಡಿಸಿತು. ಮಠದ ಪೀಠಾಧಿಪತಿಯಾಗಿದ್ದ ಶ್ರೀಗಳು ಜೈಲಿನಲ್ಲಿದ್ದ ಕಾರಣ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಿಗೆ ತಾತ್ಕಾಲಿಕವಾಗಿ ಮಠದ ಅಧಿಕಾರ ನೀಡಿದ್ದು, ನವೆಂಬರ್ 16ರಂದು ಶ್ರೀಗಳು ಜಾಮೀನಿನ ಮೇಲೆ ಬಿಡುಗಡೆಯಾದ ಬೆನ್ನಲ್ಲೇ ಮಠದ ಅಧಿಕಾರಕ್ಕೆ ಹೈಕೋರ್ಟ್ ಮೊರೆ ಹೋಗಿದ್ದರು.
ವಿಚಾರಣೆ ನಡೆಸಿದ ಹೈಕೋರ್ಟ್ ಶ್ರೀಗಳಿಗೆ ಅಧಿಕಾರ ಹಸ್ತಾಂತರಿಸುವಂತೆ ಚಿತ್ರದುರ್ಗದ ಸೆಷನ್ಸ್ ನ್ಯಾಯಾಧೀಶರಿಗೆ ಸೂಚಿಸಿದೆ. ಷರತ್ತಿನ ಅನ್ವಯ ಶ್ರೀಗಳು ಚಿತ್ರದುರ್ಗ ಜಿಲ್ಲೆ ಪ್ರವೇಶಿಸುವಂತಿಲ್ಲ. ಹೀಗಾಗಿ ಅವರು ಜಿಲ್ಲೆಯಿಂದ ಹೊರಗೆ ಇದ್ದುಕೊಂಡೇ ಮಠದ ಆಡಳಿತ ನಡೆಸಲಿದ್ದಾರೆ ಎಂದು ಹೇಳಲಾಗಿದೆ.