ಚಿತ್ರದುರ್ಗ: ಚಿತ್ರದುರ್ಗ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ದೊರೆತ ಹಿನ್ನಲೆಯಲ್ಲಿ ನಾಳೆ ಶ್ರೀಗಳು ಬಿಡುಗಡೆಯಾಗಲಿದ್ದಾರೆ.
ಚಿತ್ರದುರ್ಗ ಜಿಲ್ಲಾ ಕಾರಾಗೃಹದ ಬಳಿ ಶ್ರೀಗಳ ಪರ ವಕೀಲ ಉಮೇಶ್ ಮಾಹಿತಿ ನೀಡಿ, ಒಂದನೇ ಪೋಕ್ಸೋ ಪ್ರಕರಣದಲ್ಲಿ ಮುರುಘಾ ಶ್ರೀಗಳಿಗೆ ಜಾಮೀನು ದೊರೆತ ಹಿನ್ನೆಲೆಯಲ್ಲಿ ಬಿಡುಗಡೆ ಆದೇಶ ಪ್ರತಿ ಜಿಲ್ಲಾ ಕಾರಾಗೃಹಕ್ಕೆ ತಲುಪಿಸಲಾಗಿದೆ ಎಂದು ಹೇಳಿದ್ದಾರೆ.
ಇಂದು ಸಂಜೆ 7 ಗಂಟೆಯ ನಂತರ ಆದೇಶ ಪ್ರತಿ ಕಾರಾಗೃಹಕ್ಕೆ ತಲುಪಿದ್ದು, ನಾಳೆ ಜಿಲ್ಲಾ ಕಾರಾಗೃಹದ ಅಧಿಕಾರಿಗಳಿಂದ ಕಾನೂನು ಪ್ರಕ್ರಿಯೆ ನಡೆಯಲಿದೆ. ಜಿಲ್ಲಾ ಕಾರಾಗೃಹದ ಅಧಿಕಾರಿಗಳನ್ನು ಭೇಟಿಯಾಗಿ ಮಾತನಾಡಿದ್ದೇನೆ. ಇಂದು ಸಮಯ ಮೀರಿದ್ದರಿಂದ ನಾಳೆ ಪ್ರಕ್ರಿಯೆ ನಡೆಸುವುದಾಗಿ ಹೇಳಿದ್ದಾರೆ. ನಾಳೆ ಸಂಜೆಯೊಳಗೆ ಮುರುಘಾ ಶ್ರೀಗಳು ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ಬಾಡಿ ವಾರೆಂಟ್ ಆದೇಶದ ಮೇಲೆ ಜೈಲಿನಲ್ಲಿ ಇರಿಸಿಕೊಳ್ಳಲು ಅವಕಾಶವಿಲ್ಲ. ಹೀಗಾಗಿ ನಾಳೆ ಮರುಘಾ ಶ್ರೀ ಬಿಡುಗಡೆಯಾಗಲಿದ್ದಾರೆ ಎಂದು ವಕೀಲ ಉಮೇಶ್ ತಿಳಿಸಿದ್ದಾರೆ.