ಕಾರವಾರ: ಶೈಕ್ಷಣಿಕ ಪ್ರವಾಸಕ್ಕೆ ಬಂದಿದ್ದ ನಾಲ್ವರು ವಿದ್ಯಾರ್ಥಿನಿಯರು ಸಮುದ್ರಪಾಲಾಗಿರುವ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲುಕಿನ ಮುರುಡೆಶ್ವರದಲ್ಲಿ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ.
ಮುರುಡೇಶ್ವರ ಕಡಲ ತೀರದಲ್ಲಿ ಪ್ರವಾಸಿಗರಿಗೆ ಪೊಲೀಸರು ನಿಷೇಧ ಹೇರಿದ್ದಾರೆ. ಪ್ರವಾಸಿಗರು ಸಮುದ್ರದ ಬಳಿ ತೆರಳದಂತೆ ಸೂಚನೆ ನೀಡಿದ್ದಾರೆ.
ಕೋಲಾರದ ಮುಳಬಾಗಿಲು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳು ಶೈಕ್ಷಣಿಕ ಪ್ರವಾಸಕ್ಕೆಂದು ಮುರುಡೇಶ್ವರಕ್ಕೆ ಬಂದಿದ್ದ ವೇಳೆ ನಿನ್ನೆ ಕಡಲ ತೀರದಲ್ಲಿ ಆಟವಾಡುವಾಗ ಅಲೆಗಳ ಅಬ್ಬರಕ್ಕೆ ಸಿಲುಕಿ ನಾಲ್ವರು ವಿದ್ಯಾರ್ಥಿನಿಯರು ನೀರುಪಾಲಾಗಿದ್ದರು. ಓರ್ವ ವಿದ್ಯಾರ್ಥಿನಿ ಶ್ರವಂತಿ (15) ಶವವಾಗಿ ಪತ್ತೆಯಾಗಿದ್ದಾಳೆ. ಇನ್ನೂ ಮೂವರು ವಿದ್ಯಾರ್ಥಿನಿಯರು ನಾಪತ್ತೆಯಾಗಿದ್ದಾರೆ.
15 ವರ್ಷದ ದೀಕ್ಷಾ, ಲಾವಣ್ಯ, ವಂದನಾ ಈ ಮೂವರು ವಿದ್ಯಾರ್ಥಿನಿಯರು ಅಲೆಗಳ ಹೊಡೆತಕ್ಕೆ ಸಮುದ್ರದಲ್ಲಿ ಕೊಚ್ಚಿ ಹೋಗಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಈ ಹಿನ್ನೆಲೆಯಲ್ಲಿ ಮುರುಡೇಶ್ವರ ಕಡಲ ತೀರದಲ್ಲಿ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ.