ಬೆಂಗಳೂರು: ಮರಳು, ಜಲ್ಲಿ ಸಮಸ್ಯೆಯಿಂದ ಮನೆ ಕಟ್ಟುವವರಿಗೆ ತೊಂದರೆಯಾಗಿದೆ. ಇದನ್ನು ಮನಗಂಡ ಸರ್ಕಾರ ಸ್ಥಳೀಯ ಮರಳು ಜಲ್ಲಿ ಸಮಸ್ಯೆ ಪರಿಹಾರಕ್ಕೆ ರಾಜ್ಯದಲ್ಲೇ ಮೊದಲ ಬಾರಿಗೆ ಗಣಿ ಅದಾಲತ್ ನಡೆಸಲು ಮುಂದಾಗಿದೆ.
ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ರಾಜ್ಯದ ಬೆಳಗಾವಿ, ಕಲಬುರ್ಗಿ, ಹುಬ್ಬಳ್ಳಿ-ಧಾರವಾಡ, ಮೈಸೂರಿನಲ್ಲಿ ಅದಾಲತ್ ನಡೆಸಲಾಗುವುದು. ಮರಳು, ಜಲ್ಲಿ ಕಲ್ಲು ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳು ಶೇಕಡ 75 ರಷ್ಟು ಸಮಸ್ಯೆಗಳಿಗೆ ಸ್ಥಳೀಯವಾಗಿಯೇ ಪರಿಹಾರ ದೊರಕಿಸಿಕೊಡಲಾಗುವುದು ಎಂದು ತಿಳಿಸಿದ್ದಾರೆ.
ಸಾರ್ವಜನಿಕರಿಗೆ ಅಗತ್ಯವಾದ ಮರಳು, ಜಲ್ಲಿ ಸುಲಭವಾಗಿ ದೊರೆಯುವಂತೆ ಮಾಡಲಾಗುವುದು. ಅಕ್ರಮ ಗಣಿಗಾರಿಕೆಗಳ ಬಗ್ಗೆ ಮಾಹಿತಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.