ಮೈಸೂರು: ಹಣ ಕೊಡಲು ನಿರಾಕರಿಸಿದ ಪತ್ನಿಯನ್ನು ಪತಿ ಕೊಲೆ ಮಾಡಿದ ಘಟನೆ ಮೈಸೂರಿನ ರಾಜೀವ್ ನಗರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ನವೀದಾ ಮೃತಪಟ್ಟ ಮಹಿಳೆ. ಆರೋಪಿಯ ಪತಿ ಅಕ್ಬರ್ ಅಲಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಂಡ್ಯ ಮೂಲದ ಅಕ್ಬರ್ ಅಲಿ ಆಟೋ ಚಾಲಕನಾಗಿದ್ದ. 13 ವರ್ಷಗಳ ಹಿಂದೆ ನವೀದಾರ ಜೊತೆ ಮದುವೆಯಾಗಿದ್ದು, ಮೂವರು ಮಕ್ಕಳಿದ್ದಾರೆ.
ಅಕ್ಬರ್ ಅಲಿಗೆ ಹಿಂದೆ ಹೃದಯಾಘಾತವಾಗಿ ಆಸ್ಪತ್ರೆ ಸೇರಿದಾಗ ತವರು ಮನೆಯವರ ನೆರವಿನಿಂದ ನವೀದಾ ಚಿಕಿತ್ಸೆ ಕೊಡಿಸಿದ್ದರು. ಗುಣಮುಖನಾದ ನಂತರ ಅಕ್ಬರ್ ಅಲಿ ಪ್ರಾವಿಷನ್ ಸ್ಟೋರ್, ಆಟೋಮೊಬೈಲ್ ಶಾಪ್, ಗೂಡ್ಸ್ ಆಟೋ ಸೇರಿ ಹಲವು ವ್ಯಾಪಾರ ಆರಂಭಿಸಿ ಅನೇಕ ಕಡೆ ಸಾಲ ಮಾಡಿಕೊಂಡಿದ್ದ. ನವೀದಾರ ತವರು ಮನೆಯವರು ಕೂಡ ಆರ್ಥಿಕ ಸಹಾಯ ಮಾಡಿದ್ದರು. ಸಣ್ಣ ಅಂಗಡಿ ನಡೆಸುತ್ತಿದ್ದ ನವೀದಾ ಅನೇಕ ಸಲ ಪತಿಯ ಸಾಲ ತೀರಿಸಿದ್ದರು. ಹೀಗಿದ್ದರೂ ಆತ ಪದೇಪದೇ ಸಾಲ ಮಾಡುತ್ತಿದ್ದ. ಹಣಕ್ಕಾಗಿ ಪತ್ನಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.
ಫೆಬ್ರವರಿ 4ರಂದು ದಂಪತಿ ನಡುವೆ ಜಗಳವಾಗಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನವೀದಾ ಕಾಣದಿದ್ದಾಗ ಕುಟುಂಬದವರು ಪ್ರಶ್ನಿಸಿದ್ದಾರೆ. ಆದರೆ, ತವರು ಮನೆಗೆ ಹೋಗಿದ್ದಾಳೆ, ಅಂಗಡಿಯಲ್ಲಿದ್ದಾಳೆ ಎಂದು ಸುಳ್ಳು ಹೇಳಿದ್ದಾನೆ. ಅನುಮಾನಗೊಂಡು ಮನೆಯ ಬೀಗ ತೆಗೆದು ಒಳಗೆ ಹೋದಾಗ ನವೀದಾ ಅಸ್ವಸ್ಥರಾಗಿ ಬಿದ್ದಿರುವುದು ಕಂಡು ಬಂದಿದೆ. ಕುತ್ತಿಗೆ ಮೇಲೆ ಗಾಯದ ಗುರುತುಗಳು ಕೂಡ ಕಂಡು ಬಂದಿವೆ. ಕೂಡಲೇ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಉದಯಗಿರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.