ಬೆಂಗಳೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯೇ ಪತ್ನಿಯನ್ನು ಸುತ್ತಿಗೆಯಿಂದ ಹೊಡೆದು ಹತ್ಯೆ ಮಾಡಿದ ಘಟನೆ ಅತ್ತಿಬೆಲೆಯ ಮೇಡಹಳ್ಳಿಯಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.
ಬಿಹಾರ ಮೂಲದ ಮಲ್ಲಿಕಾ ಖಾತೂನ್(35) ಕೊಲೆಯಾದ ಮಹಿಳೆ ಎಂದು ಹೇಳಲಾಗಿದೆ. ಆರೋಪಿ ಮೊಹಮ್ಮದ್ ಸೈಯದ್ ಅನ್ಸಾರಿ(40)ನನ್ನು ಪೊಲೀಸರು ಬಂಧಿಸಿದ್ದಾರೆ. ಕಾರ್ಪೆಂಟರ್ ಆಗಿ ಕೆಲಸ ಮಾಡುತ್ತಿದ್ದ ಮೊಹಮ್ಮದ್ ಕಳೆದ 15 ವರ್ಷಗಳಿಂದ ಕುಟುಂಬದೊಂದಿಗೆ ನಗರದಲ್ಲಿ ನೆಲೆಸಿದ್ದಾನೆ. ದಂಪತಿಗೆ ಮೂವರು ಮಕ್ಕಳಿದ್ದಾರೆ.
ಮಕ್ಕಳ ಶಿಕ್ಷಣ ಮತ್ತು ಹಣಕಾಸಿನ ವಿಚಾರಕ್ಕೆ ದಂಪತಿ ಬಗ್ಗೆ ಜಗಳವಾಗುತ್ತಿತ್ತು. ಪತ್ನಿಯ ನಡತೆ ಬಗ್ಗೆ ಅನ್ಸಾರಿಗೆ ಅನುಮಾನ ಇತ್ತು. ಕ್ಷುಲ್ಲಕ ಕಾರಣಕ್ಕೆ ದಂಪತಿ ನಡುವೆ ಶನಿವಾರ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿದ್ದು, ಈ ವೇಳೆ ಕಬ್ಬಿಣದ ಸುತ್ತಿಗೆಯಿಂದ ತಲೆಗೆ ಹೊಡೆದಿದ್ದಾನೆ. ಮಲ್ಲಿಕಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಅತ್ತಿಬೆಲೆ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.