ಬೆಳಗಾವಿ: ಬೆಳಗಾವಿ ಜಿಲ್ಲೆ ಬೈಲಹೊಂಗಲ ಪಟ್ಟಣದ ಶಿವಾನಂದ ಭಾರತಿ ನಗರದ ಸತ್ಯ ಮಾರ್ಗದಲ್ಲಿ ಯುವಕನೊಬ್ಬ ತಂದೆಯನ್ನೇ ಕೊಲೆ ಮಾಡಿದ ಘಟನೆ ನಡೆದಿದೆ.
ಬಿಎಂಟಿಸಿ ಬಸ್ ಚಾಲಕ ರುದ್ರಪ್ಪ(55) ಕೊಲೆಯಾದ ವ್ಯಕ್ತಿ ಎಂದು ಹೇಳಲಾಗಿದೆ. ಪುತ್ರ ಸಂತೋಷ(30) ಕೊಲೆ ಆರೋಪಿಯಾಗಿದ್ದಾನೆ. ಮೃತ ರುದ್ರಪ್ಪನ ಪತ್ನಿ ಮಹಾದೇವಿ ಮಲ್ಲೂರ ಗ್ರಾಮದ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದು, ಅಂತರ್ಜಾತಿ ವಿವಾಹವಾಗಿದ್ದ ದಂಪತಿಗೆ ಒಬ್ಬ ಪುತ್ರ, ಒಬ್ಬ ಪುತ್ರಿ ಇದ್ದಾರೆ.
ಕ್ಷುಲ್ಲಕ ಕಾರಣಕ್ಕೆ ಪತ್ನಿ ಮಹಾದೇವಿಯೊಂದಿಗೆ ಜಗಳವಾಡಿದ ರುದ್ರಪ್ಪ ಮನಬಂದಂತೆ ಹಲ್ಲೆ ಮಾಡಿದ್ದು ಮಹಾದೇವಿ ಗಾಯಗೊಂಡಿದ್ದಾರೆ. ತಂದೆ, ತಾಯಿಯ ಜಗಳ ನಡೆದ ಬಗ್ಗೆ ತಿಳಿದ ಮಗ ಮನೆಗೆ ಬಂದು ತಾಯಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ. ಆಸ್ಪತ್ರೆ ಬಿಲ್ 1500 ರೂ.ನಲ್ಲಿ 500 ರೂಪಾಯಿ ಕಟ್ಟಿದ ಸಂತೋಷ ಬಾಕಿ ಒಂದು ಸಾವಿರ ರೂಪಾಯಿ ಕೊಡುವಂತೆ ತಂದೆಯನ್ನು ಕೇಳಲು ಮನೆಗೆ ಬಂದಿದ್ದಾನೆ.
ಆಗ ತಂದೆ, ಮಗನ ನಡುವೆ ಜಗಳವಾಗಿದ್ದು, ಆಕ್ರೋಶಗೊಂಡ ಸಂತೋಷ ಮಚ್ಚಿನಿಂದ ತಂದೆ ರುದ್ರಪ್ಪನ ಕುತ್ತಿಗೆಗೆ ಬಲವಾಗಿ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವದಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಘಟನೆ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.