ಬೆಂಗಳೂರು: ಪರಿಚಯಸ್ಥ ಮಹಿಳೆಯನ್ನು ಮನೆಗೆ ಕರೆಸಿಕೊಂಡು ಅತ್ಯಾಚಾರ ಎಸಗಿ ನಂತರ ಕೊಲೆ ಮಾಡಿದ ಘಟನೆ ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮಾಗಡಿ ರಸ್ತೆ ನಿವಾಸಿ 45 ವರ್ಷದ ಮಹಿಳೆ ಮೃತಪಟ್ಟವರು ಎಂದು ಹೇಳಲಾಗಿದೆ. ಪ್ರಿಂಟಿಂಗ್ ಪ್ರೆಸ್ ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ 23 ವರ್ಷದ ಪ್ರವೀಣ್ ಕುಮಾರ್ ಪರಿಚಿತರಾಗಿದ್ದು, ಸೋಮವಾರ ಆಕೆಯನ್ನು ಮನೆಗೆ ಕರೆಸಿಕೊಂಡಿದ್ದ ಆರೋಪಿ ಅತ್ಯಾಚಾರ ಎಸಗಿ ಕೊಲೆ ಮಾಡಿ ನಂತರ ಗೋವಾಕ್ಕೆ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಗೋವಾದಲ್ಲಿದ್ದ ಆತನನ್ನು ಗೋವಾ ಪೊಲೀಸರ ನೆರವಿನೊಂದಿಗೆ ವಶಕ್ಕೆ ಪಡೆಯಲಾಗಿದೆ. ಸೋಮವಾರ ಕೆಲಸಕ್ಕೆ ತೆರಳಿದ ಮಹಿಳೆ ಪತಿಗೆ ಕರೆ ಮಾಡಿ ಮನೆಗೆ ಬರುವುದಾಗಿ ತಿಳಿಸಿದ್ದರು. ತಡರಾತ್ರಿಯಾದರೂ ಕೂಡ ಆಕೆ ಮರಳಿರಲಿಲ್ಲ. ಪತಿ ಮಾಗಡಿ ರಸ್ತೆ ಪೊಲೀಸರಿಗೆ ದೂರು ನೀಡಿದ್ದಾರೆ. ಮಂಗಳವಾರ ಪ್ರವೀಣ್ ಕುಮಾರ್ ಮನೆಯಲ್ಲಿ ಮಹಿಳೆಯೊಬ್ಬರ ಮೃತದೇಹ ಕಂಡು ಬಂದಿದ್ದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಗೋವಾದಲ್ಲಿ ಇದ್ದ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎಂದು ಹೇಳಲಾಗಿದೆ.