
ಬೆಂಗಳೂರು: ತಲಘಟ್ಟಪುರದಲ್ಲಿ ಅಪರಿಚಿತ ವ್ಯಕ್ತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಲೆ ಮಾಡಿದ ಪತ್ನಿ ಸೇರಿ ಐವರು ಆರೋಪಿಗಳನ್ನು ತಲಘಟ್ಟಪುರ ಪೊಲೀಸರು ಬಂಧಿಸಿದ್ದಾರೆ.
ಪತ್ನಿ ರಂಜಿತಾ, ಪ್ರಿಯಕರ ಗಣೇಶ, ಶರತ್, ಶಿವಾನಂದ, ದೀಪು ಬಂಧಿತ ಆರೋಪಿಗಳು. ಆರೋಪಿ ಗಣೇಶ ಮತ್ತು ರಂಜಿತಾ ನಡುವೆ ಅಕ್ರಮ ಸಂಬಂಧ ಬೆಳೆದಿತ್ತು. ಅಕ್ರಮ ಸಂಬಂಧಕ್ಕೆ ಪತಿ ಅರುಣ್ ಕುಮಾರ್ ಅಡ್ಡಿಯಾಗಿದ್ದ ಹಿನ್ನೆಲೆಯಲ್ಲಿ ಪ್ರಿಯಕರನ ಜೊತೆ ಸೇರಿ ಪತಿ ಅರುಣ್ ಕುಮಾರ್ ನನ್ನು ಕೊಲೆ ಮಾಡಿಸಿದ್ದಾಳೆ ಎನ್ನುವುದು ತನಿಖೆಯಲ್ಲಿ ಗೊತ್ತಾಗಿದೆ.
ಜೂ. 28ರಂದು ಅರುಣ್ ಕುಮಾರ್ ನನ್ನು ಕೊಲೆ ಮಾಡಿದ್ದು, ತಲಘಟ್ಟಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಆರೋಪಿಗಳನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.