ಬೆಂಗಳೂರು: ಪತಿಯನ್ನು ಬಿಟ್ಟು ತನ್ನೊಂದಿಗೆ ಬರಲು ಒಪ್ಪದ ಕಾರಣ ಮಹಿಳೆಯನ್ನು ಕೊಲೆ ಮಾಡಿ ಪ್ರಿಯಕರ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ನಲ್ಲೂರಹಳ್ಳಿಯಲ್ಲಿ ನಡೆದಿದೆ.
ಮೊಹುವಾ ಮಂಡಲ್(26) ಕೊಲೆಯಾದ ಮಹಿಳೆ. ಮಿಥುನ್ ಮಂಡಲ್(40) ಆತ್ಮಹತ್ಯೆ ಮಾಡಿಕೊಂಡ ಪ್ರಿಯಕರ. ಪತಿಯನ್ನು ತೊರೆದು ತನ್ನೊಂದಿಗೆ ಬರದ ಕಾರಣ ಸಿಟ್ಟಿನಿಂದ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ನಂತರ ಬಂಧನ ಭೀತಿಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇಬ್ಬರೂ ಪಶ್ಚಿಮ ಬಂಗಾಳ ಮೂಲದವರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದರು. ಇಬ್ಬರ ನಡುವೆ ಪರಿಚಯವಾಗಿ ಪ್ರೀತಿಗೆ ತಿರುಗಿದ್ದು, ಪತಿಯನ್ನು ಬಿಟ್ಟು ಬರುವಂತೆ ಮಿಥುನ್ ಒತ್ತಾಯಿಸಿದ್ದಾನೆ. ಆಕೆ ನಿರಾಕರಿಸಿದಾಗ ಚಾಕುವಿನಿಂದ ಕತ್ತು ಕೊಯ್ದು ಕೊಲೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬುಧವಾರ ರಾತ್ರಿ ಪಟ್ಟಂದೂರು ಅಗ್ರಹಾರದ ಐಟಿಪಿಎಲ್ ಹಿಂದಿನ ಗೇಟ್ ರಸ್ತೆ ಮನೆ ಬಳಿ ಬಂದು ಆಕೆಯನ್ನು ಕೊಲೆ ಮಾಡಿ ಪರಾರಿಯಾಗಿದ್ದು, ವೈಟ್ ಫೀಲ್ಡ್ ಠಾಣೆ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಬಂಧನ ಭೀತಿಯಿಂದ ಆರೋಪಿ ನಲ್ಲೂರಹಳ್ಳಿ ಕೆರೆಯ ಬಳಿ ಮರವೊಂದಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.