
ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕು ಟಕ್ನೋಡದಲ್ಲಿ ಮರ್ಯಾದೆಗೇಡು ಹತ್ಯೆ ನಡೆದಿದೆ. ಮಗಳನ್ನು ಪ್ರೀತಿಸಿ ಮದುವೆಯಾದ ಯುವಕನನ್ನು ಯುವತಿಯ ತಂದೆ ಹಾಗೂ ಮೂವರು ಸೇರಿ ಕೊಲೆ ಮಾಡಿದ್ದಾರೆ.
ಭಜಬಲಿ(34) ಕೊಲೆಯಾದ ಯುವಕ. ಅನ್ಯ ಜಾತಿಗೆ ಸೇರಿದ ತಮ್ಮನ ಗೌಡ ಪಾಟೀಲರ ಪುತ್ರಿಯನ್ನು ಪ್ರೀತಿಸಿ ಭುಜಬಲಿ ಮದುವೆಯಾಗಿದ್ದ. ಎಂಟು ತಿಂಗಳ ಹಿಂದೇ ರಿಜಿಸ್ಟರ್ ಮ್ಯಾರೇಜ್ ಆಗಿದ್ದು, ಅವರು ಗ್ರಾಮಕ್ಕೆ ಬಂದಿರಲಿಲ್ಲ. ಪೊಲೀಸ್ ಠಾಣೆಯಲ್ಲಿ ಇಬ್ಬರ ಮನೆಯವರ ನಡುವೆ ಸಂಧಾನ ನಡೆದು ನಾಲ್ಕು ತಿಂಗಳಿನಿಂದ ಗ್ರಾಮದಲ್ಲಿ ವಾಸವಾಗಿದ್ದರು.
ಶನಿವಾರ ರಾತ್ರಿ ಭುಜಬಲಿ ಬೈಕ್ ನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಕಣ್ಣಿಗೆ ಖಾರದಪುಡಿ ಎರಚಿ ಕಬ್ಬು ಕಟಾವು ಮಾಡುವ ಹರಿತವಾದ ವಸ್ತುವಿನಿಂದ ಇರಿದು ಕೊಲೆ ಮಾಡಲಾಗಿದೆ. ಸಾವಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ತಮ್ಮನ ಗೌಡ ಪಾಟೀಲನನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳ ಬಂಧನಕ್ಕೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.