
ಕಲಬುರ್ಗಿ: ಅಕ್ರಮ ಸಂಬಂಧ ಹೊಂದಿದ್ದ ಮಹಿಳೆ ಪ್ರಿಯಕರನೊಂದಿಗೆ ಸೇರಿ ಗಂಡನನ್ನು ಕೊಲೆ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸೇಡಂ ತಾಲೂಕಿನ ಈರನಾಪಲ್ಲಿಯಲ್ಲಿ ಘಟನೆ ನಡೆದಿದ್ದು, ಮದ್ಯ ಸೇವಿಸಿ ಪತಿ ಮೃತಪಟ್ಟಿರುವುದಾಗಿ ಮಹಿಳೆ ಬಿಂಬಿಸಿದ್ದಾಳೆ. ಎರಡು ತಿಂಗಳ ನಂತರ ಕೊಲೆ ವಿಷಯ ಬೆಳಕಿಗೆ ಬಂದಿದೆ.
ಈರನಾಪಲ್ಲಿಯ ರಾಜಪ್ಪ(35) ಮೃತಪಟ್ಟ ವ್ಯಕ್ತಿ ಎಂದು ಹೇಳಲಾಗಿದೆ. ಮೃತನ ಪತ್ನಿ ಹಾಗೂ ಪ್ರಿಯಕರ ತೆಲಂಗಾಣದ ಕೊಡಂಗಲ ತಾಲೂಕಿನ ಅಂತಾವರ ಗ್ರಾಮದ ನಿವಾಸಿ ಶ್ರೀಶೈಲಂ ಅವರನ್ನು ಬಂಧಿಸಲಾಗಿದೆ.
ಮದ್ಯದಲ್ಲಿ ವಿಷದ ಮಾತ್ರೆ ಹಾಕಿ ಕೊಲೆಗೆ ಯತ್ನಿಸಿದ್ದ ಆರೋಪಿಗಳು ಬಳಿಕ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಈ ಕೃತ್ಯಕ್ಕೆ ಶ್ರೀಶೈಲಂ ಸಂಬಂಧಿ ಅಶೋಕ ಸಹಾಯ ಮಾಡಿದ್ದಾನೆ. ಕೊಲೆ ಮಾಡಿದ ನಂತರ ಮೃತದೇಹವನ್ನು ಮನೆಯ ಬಾಗಿಲಲ್ಲಿ ಇಟ್ಟಿದ್ದ ಆರೋಪಿಗಳು ಮದ್ಯ ಸೇವಿಸಿ ಮೃತಪಟ್ಟಿದ್ದಾನೆ ಎಂದು ಗ್ರಾಮಸ್ಥರನ್ನು ನಂಬಿಸಿ ಅಂತ್ಯಸಂಸ್ಕಾರವನ್ನೂ ನೆರವೇರಿಸಿದ್ದಾರೆ.
ಎರಡು ತಿಂಗಳಾದ ನಂತರ ಶ್ರೀಶೈಲಂ ಈರನಾಪಲ್ಲಿಗೆ ಆಗಮಿಸಿದ್ದು, ಅನುಮಾನಗೊಂಡ ಗ್ರಾಮಸ್ಥರು ವಿಚಾರಣೆ ನಡೆಸಿದಾಗ ವಿಷಯ ಬೆಳಕಿಗೆ ಬಂದಿದೆ. ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಲಾಗಿದ್ದುಮ ಕೃತ್ಯಕ್ಕೆ ಸಹಕಾರ ನೀಡಿದ ಅಶೋಕನ ಪತ್ತೆಗಾಗಿ ಬಲೆಬೀಸಲಾಗಿದೆ, ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.