
ಹಾಸನ: ಅಕ್ರಮ ಸಂಬಂಧಕ್ಕೆ ಒಪ್ಪದ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಮಾರಕಾಸ್ತ್ರದಿಂದ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಹಾಸನ ಜಿಲ್ಲೆಯ ದೊಡ್ಡಪುರದಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಲತೇಶ್(35) ನನ್ನು ಪೊಲೀಸರು ಬಂಧಿಸಿದ್ದಾರೆ.
ಫೆಬ್ರವರಿ 16 ರಂದು ದೊಡ್ಡಪುರ ಗ್ರಾಮದಲ್ಲಿ ಮಹಿಳೆಯ ಬರ್ಬರ ಹತ್ಯೆ ನಡೆಸಲಾಗಿತ್ತು. ಹತ್ಯೆಗೆ ನಾಲ್ಕು ದಿನಗಳ ಹಿಂದೆ ಮಹಿಳೆಯ ಬಳಿ ಬಂದಿದ್ದ ಆರೋಪಿ ಅಸಭ್ಯ ವರ್ತನೆ ತೋರಿದ್ದ. ಗಂಡನನ್ನು ಬಿಟ್ಟು ತನ್ನೊಂದಿಗೆ ಸಂಬಂಧ ಬೆಳೆಸುವಂತೆ ಪೀಡಿಸಿದ್ದ. ಇದರಿಂದ ಆಕ್ರೋಶಗೊಂಡ ಮಹಿಳೆ ಮನೆಯವರಿಗೆ ವಿಷಯ ತಿಳಿಸಿ ಆತನಿಗೆ ಬುದ್ಧಿವಾದ ಹೇಳಿ ಕಳುಹಿಸಲಾಗಿತ್ತು.
ಫೆಬ್ರವರಿ 16 ರಂದು ಮತ್ತೆ ಮಹಿಳೆಯ ಬಳಿ ಬಂದಿದ್ದ ಲತೇಶ್ ಮದುವೆಯಾಗುವಂತೆ ಪೀಡಿಸಿದ ಅಲ್ಲದೆ ತನ್ನೊಂದಿಗೆ ಅಕ್ರಮ ಸಂಬಂಧ ಬೆಳೆಸುವಂತೆ ಬಲವಂತ ಮಾಡಿದ್ದಕ್ಕೆ ಮಹಿಳೆ ಒಪ್ಪದಿದ್ದಾಗ ಮಾರಕಾಸ್ತ್ರಗಳಿಂದ ಥಳಿಸಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಪೋಲಿಸ್ ಶ್ವಾನದಳ ಸುಳಿವು ಆಧರಿಸಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ವಿಚಾರ ಬೆಳಕಿಗೆ ಬಂದಿದೆ. ಹಾಸನ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
2010 ರಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಜೈಲು ಸೇರಿದ್ದ ಆರೋಪಿ ನಾಲ್ಕು ವರ್ಷಗಳ ನಂತರ ಬಿಡುಗಡೆಯಾಗಿದ್ದ. ಈಗ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ಮಾಡಿದ್ದಾನೆ.