ವಿಜಯಪುರ: ಮರ್ಯಾದಾಗೇಡು ಹತ್ಯೆ ಮಾಡಿದ್ದ ಇಬ್ಬರು ಅಪರಾಧಿಗಳಿಗೆ ಗಲ್ಲು ಶಿಕ್ಷೆ, 5 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ವಿಜಯಪುರದ ಎರಡನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಆದೇಶ ಹೊರಡಿಸಿದೆ.
ಇಬ್ರಾಹಿಂ ಸಾಬ್ ಅತ್ತಾರ್, ಅಕ್ಬರ್ ಸಾಬ್ ಅತ್ತಾರ್ ಅವರಿಗೆ ಗಲ್ಲು ಶಿಕ್ಷೆ ನೀಡಲಾಗಿದೆ. ರಂಜಾನ್ ಬೀ ಅತ್ತಾರ್, ದಾವಲಭೀ, ಜಮಾದಾರ್, ಜಿಲಾನಿ, ಅಬ್ದುಲ್ ಖಾದರ್, ದಾವಲಭೀ ಧನ್ನೂರ ಅವರಿಗೆ ಜೀವಾವಧಿ ಶಿಕ್ಷೆ ಜೊತೆಗೆ 4.19 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.
2017ರಲ್ಲಿ ಗುಂಡಕನಾಳ ಗ್ರಾಮದಲ್ಲಿ ಗರ್ಭಿಣಿ ಬಾನು ಬೇಗಂ ಅತ್ತಾರ್ ಕೊಲೆ ಮಾಡಲಾಗಿತ್ತು. ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಹಾಳಾಗುಂಡಕನಾಳ ಗ್ರಾಮದಲ್ಲಿ ಬಾನು ಬೇಗಂ ಅತ್ತಾರ್, ಸಾಯಬಣ್ಣ ಕೊಣ್ಣೂರ ಪ್ರೀತಿಸಿ ಮದುವೆಯಾಗಿ ಬೇರೆ ಊರಿನಲ್ಲಿ ನೆಲೆಸಿದ್ದರು. ಹೆರಿಗೆಗಾಗಿ ಗಂಡನ ಮನೆಗೆ ಬಂದಿದ್ದ ವೇಳೆ ದಂಪತಿಯ ಮೇಲೆ ದಾಳಿ ಮಾಡಿ ಮಾರಣಾಂತಿಕ ಹಲ್ಲೆ ನಡೆಸಿದ್ದರು.
ಮೂರ್ಛೆ ಹೋದ ಭಾನು ಬೇಗಂ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದರು. ಆಕೆಯ ತಂದೆ, ತಾಯಿ ಸಂಬಂಧಿಕರು ಕೃತ್ಯವೆಸಗಿದ್ದರು. ಹಲ್ಲೆಕೋರರಿಂದ ಸಾಯಬಣ್ಣ ಕೊಣ್ಣೂರನನ್ನು ಸಾರ್ವಜನಿಕರು ರಕ್ಷಿಸಿದ್ದರು.
ಮರ್ಯಾದಾ ಹತ್ಯೆ ಬಗ್ಗೆ ತಾಳಿಕೋಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು ಚಾರ್ಜ್ ಶೀಟ್ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಎಸ್.ಎಸ್ ಲೋಕೂರ ವಾದ ಮಂಡಿಸಿದ್ದರು. ಸುದೀರ್ಘ ವಾದ, ಪ್ರತಿವಾದ ಆಲಿಸಿದ ನ್ಯಾಯಾಧೀಶರಾದ ಎಲ್.ಪಿ. ಸತೀಶ್ ಶಿಕ್ಷೆ ಪ್ರಕಟಿಸಿದ್ದಾರೆ. ಇಬ್ಬರು ಅಪರಾಧಿಗಳಿಗೆ ಗಲ್ಲು, ಆರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ನೀಡಿ ನೀಡಿ ಆದೇಶ ಹೊರಡಿಸಿದ್ದಾರೆ.