ಬೆಳಗಾವಿ: ಪ್ರತಿದಿನ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ ಪುತ್ರನನ್ನು ತಂದೆಯೇ ಸುಪಾರಿ ಕೊಟ್ಟು ಕೊಲೆ ಮಾಡಿಸಿದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಬೆಳಗಾವಿ ಜಿಲ್ಲೆ ಬೈಲಹೊಂಗಲದ ಶಿವಾನಂದ ಭಾರತಿ ನಗರದ ಸಂಗಮೇಶ(35) ಕೊಲೆಯಾದ ವ್ಯಕ್ತಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಯರಗಟ್ಟಿ ತಾಲೂಕಿನ ಹಿರೇಕೊಪ್ಪ ಗ್ರಾಮದ ಮಂಜುನಾಥ(43), ಅಡಿವೆಪ್ಪ(38) ಎಂಬುವರನ್ನು ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿಯಾಗಿರುವ ಮೃತ ಸಂಗಮೇಶ್ವನ ತಂದೆ ಮಾರುತಿ ಅನಾರೋಗ್ಯದ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆಗಸ್ಟ್ 20ರಂದು ಬೆಳಿಗ್ಗೆ ಮುರಗೋಡ ಪೊಲೀಸ್ ಠಾಣೆ ವ್ಯಾಪ್ತಿಯ ಕುಟರನಟ್ಟಿ ಗ್ರಾಮದಲ್ಲಿ ಸಂಗಮೇಶ್ ಶವ ಪತ್ತೆಯಾಗಿತ್ತು. ಆತನ ಸಹೋದರ ಮಹೇಶ್ ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡು ಕೊಲೆ ಪ್ರಕರಣ ಬಯಲಿಗೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಮೃತ ಸಂಗಮೇಶ್ವರ ಮತ್ತು ಆರೋಪಿ ಮಂಜುನಾಥ ಈರುಳ್ಳಿ ವ್ಯಾಪಾರ ಮಾಡುತ್ತಿದ್ದರು. ಸಂಗಮೇಶ್ ಮದ್ಯವ್ಯಸನಿಯಾಗಿದ್ದರಿಂದ ಮನೆಯವರ ನೆಮ್ಮದಿ ಹಾಳಾಗಿತ್ತು. ಎಷ್ಟೇ ಹೇಳಿದರೂ ಕುಡಿಯುವುದನ್ನು ಬಿಟ್ಟಿರಲಿಲ್ಲ. ಇದು ಹೀಗೆ ಮುಂದುವರೆದರೆ ಮನೆಯವರಿಗೆ ನೆಮ್ಮದಿ ಇರಲ್ಲ ಎಂದು ಮಾರುತಿ ಮಗನನ್ನೇ ಕೊಲೆ ಮಾಡಿಸುವ ತೀರ್ಮಾನಕ್ಕೆ ಬಂದಿದ್ದಾರೆ.
ಪುತ್ರನ ಸ್ನೇಹಿತನೇ ಆಗಿದ್ದ ಮಂಜುನಾಥನಿಗೆ ಸುಪಾರಿ ಕೊಟ್ಟಿದ್ದಾರೆ. ಆಗಸ್ಟ್ 19ರಂದು ಗೋಕಾಕ್ ತಾಲೂಕಿನ ಅಂಕಲಗಿಯಲ್ಲಿ ಸಂಗಮೇಶನಿಗೆ ಕಂಠಪೂರ್ತಿ ಕೊಡಿಸಿ ಕುಟರನಟ್ಟಿ ಸಮೀಪ ಬೈಕ್ ನಲ್ಲಿ ಕರೆದುಕೊಂಡು ಬಂದಿದ್ದು, ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾರೆ. ಮಂಜುನಾಥನಿಗೆ ಅಡಿವೆಪ್ಪ ಸಹಕಾರ ನೀಡಿದ್ದಾನೆ. ಇಬ್ಬರೂ ಆರೋಪಿಗಳು ಮೃತ ದೇಹ ಎಸೆದು ಪರಾರಿಯಾಗಿದ್ದು, ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ಅಭಿಕ್ಷಕ ಡಾ. ಸಂಜೀವ್ ಪಾಟೀಲ್ ಮಾಹಿತಿ ನೀಡಿದ್ದಾರೆ.