ಬೆಂಗಳೂರು: ಶೀಲ ಶಂಕಿಸಿ ಪತ್ನಿ ಕೊಲೆ ಮಾಡಿದ ಪತಿಗೆ ಜೀವಾವಧಿ ಶಿಕ್ಷೆ ವಿಧಿಸಿ 71ನೇ ಅಧೀನ ಸಿವಿಲ್ ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಶಿವನಗರದ 12ನೇ ಸಿ ಮೇನ್ ರಸ್ತೆ ನಿವಾಸಿ ಹನುಮಂತ ಜಟ್ಟಪ್ಪ ಬೈಲಪತ್ತರ್ ಶಿಕ್ಷೆಗೆ ಒಳಗಾದ ಅಪರಾಧಿ. ಪತ್ನಿ ಜಯಶ್ರೀಯನ್ನು ಈತ ಕೊಲೆ ಮಾಡಿದ್ದ. ನ್ಯಾಯಾಧೀಶರಾದ ಬಾಲಚಂದ್ರ ಭಟ್ ವಾದ, ಪ್ರತಿವಾದ ಆಲಿಸಿ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ದಂಪತಿಯ ಇಬ್ಬರು ಮಕ್ಕಳಿಗೆ ಪರಿಹಾರ ನೀಡುವಂತೆ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ನ್ಯಾಯಾಧೀಶರು ಸೂಚಿಸಿದ್ದಾರೆ. ಪಬ್ಲಿಕ್ ಪ್ರಾಸಿಕ್ಯೂಟರ್ ಹೆಚ್.ಆರ್. ಸತ್ಯವತಿ ಅವರು ವಾದ ಮಂಡಿಸಿದ್ದರು.
15 ವರ್ಷಗಳ ಹಿಂದೆ ಹನುಮಂತ ಮತ್ತು ಜಯಶ್ರೀ ಮದುವೆಯಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಪತ್ನಿ ಶೀಲ ಶಂಕಿಸಿ ಜಗಳ ಮಾಡಿ ಹನುಮಂತ ಹಲ್ಲೆ ನಡೆಸಿದ್ದರಿಂದ ನೊಂದ ಜಯಶ್ರೀ ತಾಯಿಯ ಮನೆಗೆ ಹೋಗಿದ್ದರು. ಅಲ್ಲಿಗೆ ಬಂದ ಹನುಮಂತ ಪುಸಲಾಯಿಸಿ ಮನೆಗೆ ಕರೆದುಕೊಂಡು ಹೋಗಿದ್ದ. ಲೈಂಗಿಕ ಕ್ರಿಯೆಗೆ ಸಹಕರಿಸದ ಪತ್ನಿ ಮೇಲೆ ಕೋಪಗೊಂಡು ಕಲ್ಲು ಮತ್ತು ಚಾಕುವಿನಿಂದ ಹಲ್ಲೆ ಮಾಡಿದ್ದ. 2018ರಲ್ಲಿ ಪತ್ನಿಯನ್ನು ಕೊಲೆ ಮಾಡಿದ್ದ ಬಗ್ಗೆ ಬಸವೇಶ್ವರನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು.