ಬೆಂಗಳೂರು: ಪತ್ನಿ ಮತ್ತು ನಾದಿನಿಯನ್ನು ಹತ್ಯೆಮಾಡಿದ ಸಂಗೀತ ನಿರ್ದೇಶಕರಿಗೆ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.
ಚಂದ್ರಶೇಖರ್ 2013 ರಲ್ಲಿ ಪತ್ನಿ ಮತ್ತು ನಾದಿನಿಯನ್ನು ಹತ್ಯೆ ಮಾಡಿದ್ದು, ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಕೌಟುಂಬಿಕ ಕಲಹದ ಕಾರಣಕ್ಕೆ ಅವರ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. 2013ರಲ್ಲಿ ಮನೆಗೆ ಬಂದಿದ್ದ ಪತ್ನಿ ಮತ್ತು ನಾದಿನಿಗೆ ಮದ್ಯ ಕುಡಿಸಿದ್ದ ಆರೋಪಿ ಕಬ್ಬಿಣದ ರಾಡ್ ನಿಂದ ತಡಲೆಗೆ ಹೊಡೆದು ಹತ್ಯೆ ಮಾಡಿದ್ದ.
ಚಂದ್ರಶೇಖರ್ ವಿರುದ್ಧ ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 8 ವರ್ಷಗಳಿಂದ ವಿಚಾರಣೆ ನಡೆದಿದ್ದು ಬುಧವಾರ ಜೀವಾವಧಿ ಶಿಕ್ಷೆ ವಿಧಿಸಿ ಕೋರ್ಟ್ ತೀರ್ಪು ನೀಡಿದೆ. ಸರ್ಕಾರಿ ಅಭಿಯೋಜಕಿ ಹೆಚ್.ಆರ್. ಸತ್ಯವತಿ ಅವರು ಮರಣದಂಡನೆ ವಿಧಿಸುವಂತೆ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ಸಂಗೀತ ನಿರ್ದೇಶಕ, ಗಾಯಕ ಆಗಿರುವ ಚಂದ್ರಶೇಖರ್ ವೀಣೆ, ಕೊಳಲು ನುಡಿಸುತ್ತಾರೆ. ಜೈಲಿನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳಲ್ಲಿ ಮನರಂಜಿಸಿದ್ದಾರೆ ಎನ್ನಲಾಗಿದೆ.