ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಚಿತ್ರಹಿಂಸೆ ನೀಡಿ ಕೊಲೆ ಮಾಡಿರುವ ಆಘಾತಕಾರಿ ಸಂಗತಿ ಬಯಲಾಗಿದೆ. ಮೂರು ಹಂತದಲ್ಲಿ ದರ್ಶನ್ ಮತ್ತು ಸಹಚರರು ರೇಣುಕಾ ಸ್ವಾಮಿ ಮೇಲೆ ಪಟ್ಟಣಗೆರೆ ಶೆಡ್ ನಲ್ಲಿ ಹಲ್ಲೆ ಮಾಡಿದ್ದಾರೆ. ಎದೆ ಮತ್ತು ವೃಷಣದ ಮೇಲೆ ಕಾಲಿಟ್ಟು ದರ್ಶನ್ ಜ್ರೌರ್ಯ ಮೆರೆದಿದ್ದರು ಎಂದು ಹೇಳಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ದರ್ಶನ್ ಮತ್ತು ಅವರ 15 ಮಂದಿ ಸಹಚರರನ್ನು ಪ್ರತ್ಯೇಕವಾಗಿ ವಿಚಾರಣೆಗೆ ಒಳಪಡಿಸಿದಾಗ ರೇಣುಕಾಸ್ವಾಮಿ ಮೇಲೆ ನಡೆದಿದ್ದ ದೈಹಿಕ ಹಲ್ಲೆಯ ಕೃತ್ಯಗಳು ಬಯಲಾಗಿದೆ.
ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳಿಸಿದ್ದ ಕಾರಣಕ್ಕೆ ಬುದ್ಧಿ ಕಲಿಸಲು ರೇಣುಕಾಸ್ವಾಮಿ ಕರೆತರುವಂತೆ ಚಿತ್ರದುರ್ಗ ಜಿಲ್ಲೆಯ ತಮ್ಮ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರಗೆ ದರ್ಶನ್ ಸೂಚಿಸಿದ್ದರು. ಜಗದೀಶ, ಅನುಕುಮಾರ್, ರವಿಶಂಕರ್ ಅವರೊಂದಿಗೆ ಸೇರಿ ರಾಘವೇಂದ್ರ ಜೂನ್ 8ರಂದು ಚಿತ್ರದುರ್ಗದಿಂದ ರೇಣುಕಾ ಸ್ವಾಮಿಯನ್ನು ಅಪಹರಿಸಿ ತಲೆ ಮೇಲೆ ಹೊಡೆದುಕೊಂಡು ಕರೆತಂದಿದ್ದಾರೆ.
ಹಲ್ಲೆಯಿಂದಾಗಿ ರೇಣುಕಾಸ್ವಾಮಿ ಸ್ವಲ್ಪ ಮಟ್ಟಿಗೆ ಹೈರಾಣಾಗಿದ್ದ. ಎರಡನೇ ಹಂತದಲ್ಲಿ ಶನಿವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಪಟ್ಟಣಗೆರೆ ಶೆಡ್ ನಲ್ಲಿ ರೇಣುಕಾ ಸ್ವಾಮಿ ಮೇಲೆ ನಂದೀಶ್, ಧನರಾಜ್, ಪವನ್, ಕಾರ್ತಿಕ್, ದೀಪಕ್ ಸೇರಿದಂತೆ ಇತರರು ಹಲ್ಲೆ ಮಾಡಿ ಕರೆಂಟ್ ಶಾಕ್ ನೀಡಿದ್ದರು.
ನಂತರ ದರ್ಶನ್ ಆಗಮಿಸಿ ರೇಣುಕಾ ಸ್ವಾಮಿ ವೃಷಣ ಮತ್ತು ಎದೆಯನ್ನು ತುಳಿದು ಹಿಂಸೆ ನೀಡಿದ್ದಾರೆ. ಆಗ ಅವರ ಸಹಚರರು ಹಿಗ್ಗಾಮುಗ್ಗಾ ತಳಿಸಿದ್ದು ಲಾರಿಗೆ ರೇಣುಕಾ ಸ್ವಾಮಿ ತಲೆಯನ್ನು ಗುದ್ದಿಸಿದ್ದಾರೆ. ಗಂಭೀರ ಗಾಯವಾಗಿ ರಕ್ತಸ್ರಾವದಿಂದ ಪ್ರಜ್ಞೆ ತಪ್ಪಿದ್ದಾನೆ. ನಂತರ ಕೆಲವರು ಅರಿಶಿನ ಮೆತ್ತಿ ರಕ್ತ ಸೋರದಂತೆ ತಡೆದಿದ್ದಾರೆ. ಬಳಿಕ ದರ್ಶನ್ ಪವಿತ್ರಾ ಗೌಡ ಕರೆದುಕೊಂಡು ಶಶೆಡ್ ನಿಂದ ತೆರಳಿದ್ದಾರೆ. ಮೆದುಳಿನಲ್ಲಿ ರಕ್ತಸ್ರಾವವಾಗಿ ರೇಣುಕಾ ಸ್ವಾಮಿ ಮೃತಪಟ್ಟಿದ್ದಾರೆ. ಆರ್.ಆರ್. ನಗರ ನಿವಾಸದಲ್ಲಿದ್ದ ದರ್ಶನ್ ಗೆ ರೇಣುಕಾಸ್ವಾಮಿ ಮೃತಪಟ್ಟಿರುವ ವಿಷಯ ತಿಳಿಸಲಾಗಿದೆ ಎಂದು ಹೇಳಲಾಗಿದೆ.