ತುಮಕೂರು: ದಲಿತ ಮಹಿಳೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೇ ಗ್ರಾಮದ 21 ಅಪರಾಧಿಗಳಿಗೆ ತುಮಕೂರು ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
2010ರ ಜೂನ್ 28ರಂದು ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಪಾಲಪುರ ಗ್ರಾಮದಲ್ಲಿ ಡಾಬಾ ಹೊನ್ನಮ್ಮ ಎನ್ನುವ ದಲಿತ ಮಹಿಳೆಯ ಕೊಲೆಯಾಗಿತ್ತು. 14 ವರ್ಷಗಳ ನಂತರ ಒಂದೇ ಗ್ರಾಮದ 21 ಆರೋಪಿಗಳಿಗೆ ತುಮಕೂರು ಮೂರನೇ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿ ಆದೇಶ ಹೊರಡಿಸಿದ್ದು, ತಲಾ 13500 ರೂ. ದಂಡ ವಿಧಿಸಿದೆ.
ಡಾಬಾ ಹೊನ್ನಮ್ಮ ಎಂಬ ದಲಿತ ಮಹಿಳೆಯನ್ನು ಸವರ್ಣೀಯರು ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದರು. ಅಂದನಕೆರೆ ಪೊಲೀಸ್ ಠಾಣೆಯಲ್ಲಿ 27 ಮಂದಿ ವಿರುದ್ಧ ಕೊಲೆ ಹಾಗೂ ಜಾತಿ ನಿಂದನೆ ಆರೋಪದಡಿ ಕೇಸು ದಾಖಲಾಗಿತ್ತು. ಅಂದಿನ ಡಿವೈಎಸ್ಪಿ ಶಿವರುದ್ರಸ್ವಾಮಿ ತನಿಖೆ ನಡೆಸಿ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ವಿಚಾರಣೆಯ ಸಂದರ್ಭದಲ್ಲಿ ಆರೋಪ ಸಾಬೀತಾಗಿದ್ದು, ನ್ಯಾಯಾಧೀಶರಾದ ನಾಗಿರೆಡ್ಡಿ ಅವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿದ್ದಾರೆ. 27 ಜನ ಆರೋಪಿಗಳಲ್ಲಿ ಆರು ಜನ ಮೃತಪಟ್ಟಿದ್ದು, ಇಬ್ಬರು ಮಹಿಳೆಯರು ಸೇರಿ21 ಮಂದಿಗೆ ಶಿಕ್ಷೆ ವಿಧಿಸಲಾಗಿದೆ.