ಶಿವಮೊಗ್ಗ: ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಯುವಕನನ್ನು ಕೊಲೆ ಮಾಡಿದ ನಾಲ್ವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಹೊಸಹಳ್ಳಿ ನಿವಾಸಿ ಜಿಕ್ರುಲ್ಲಾ(28) ಕೊಲೆಯಾದ ವ್ಯಕ್ತಿ. ಶಿವಮೊಗ್ಗದ ಎನ್.ಟಿ. ರಸ್ತೆಯಲ್ಲಿ ಹರಿತ ಆಯುಧದಿಂದ ಚುಚ್ಚಿ ಕೊಲೆ ಮಾಡಿದ್ದ ನಾಲ್ವರಿಗೆ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಮಿಳಘಟ್ಟದ ಶಹಬಾಜ್ ಶರೀಪ್(20), ಟೆಂಪೋ ಸ್ಟಾಂಡ್ ನಿವಾಸಿ ವಸೀಮ್ ಅಕ್ರಮ್(20), ಬುದ್ಧನಗರದ ಕಾಲಾ ವಸೀಮ್(20), ಮುರಾದ್ ನಗರದ ಫಯಾಜ್ ಉಲ್ಲಾ ರೆಹಮಾನ್(23) ಶಿಕ್ಷೆಗೆ ಒಳಗಾದವರು.
2022ರ ಮಾರ್ಚ್ 19 ರಂದು ರಾತ್ರಿ ಎನ್.ಟಿ. ರಸ್ತೆಯ ಫಲಕ್ ಶಾದಿ ಮಹಲ್ ಪಕ್ಕ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದಾಗ ತೀವ್ರ ಹಲ್ಲೆ ಮಾಡಿದ್ದರು. ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಮಾರ್ಚ್ 20ರಂದು ಮೃತಪಟ್ಟಿದ್ದ.
ಈ ಬಗ್ಗೆ ದೊಡ್ಡಪೇಟೆ ಪೊಲೀಸ್ ಠಾಣೆಗೆ ಮೃತನ ಸಹೋದರ ದೂರು ನೀಡಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ಆಗಿನ ತನಿಖಾಧಿಕಾರಿ ಅಂಜನ್ ಕುಮಾರ್ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಬಿ.ಆರ್. ಪಲ್ಲವಿ ಆರೋಪಿತರ ವಿರುದ್ಧದ ಆರೋಪಗಳು ದೃಢಪಟ್ಟ ಹಿನ್ನೆಲೆಯಲ್ಲಿ ನಾಲ್ವರಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ 30ಸಾವಿರ ರೂಪಾಯಿ ದಂಡ ವಿಧಿಸಿ ಆದೇಶಿಸಿದ್ದಾರೆ. ಸರ್ಕಾರಿ ಅಭಿಯೋಜಕರಾದ ಪಿ.ಒ. ಪುಷ್ಪಾ ಅವರು ವಾದ ಮಂಡಿಸಿದ್ದರು.