ರಾಮನಗರ: ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ನಡೆದ ಕೊಲೆ ಪ್ರಕರಣವನ್ನು ಬಯಲಿಗೆಳೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಜುಲೈ 15 ರಂದು ಸಂಜೆ ಚನ್ನಪಟ್ಟಣದ ಮಹದೇಶ್ವರ ನಗರದಲ್ಲಿ ಮನೆಯ ಬೆಡ್ರೂಮ್ ನಲ್ಲಿ ಮಹಿಳೆಯನ್ನು ಕೊಲೆ ಮಾಡಲಾಗಿತ್ತು. ಚಾಕುವಿನಿಂದ ಇರಿದು ಮಹಿಳೆಯನ್ನು ಕೊಲೆ ಮಾಡಿದ್ದು, ಹಾಡಹಗಲೇ ನಡೆದ ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿತ್ತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಓಂ ಪ್ರಕಾಶ್ ನೇತೃತ್ವದಲ್ಲಿ ಗ್ರಾಮಾಂತರ ಸರ್ಕಲ್ ಇನ್ಸ್ಪೆಕ್ಟರ್ ಟಿ.ಬಿ. ಶಿವಕುಮಾರ್ ಹಾಗೂ ಇತರೆ ಪೊಲೀಸ್ ಅಧಿಕಾರಿಗಳ ತಂಡ ಆರೋಪಿಗಳನ್ನು ಬಂಧಿಸಿದೆ.
ಮೃತ ಮಹಿಳೆಯ ಗಂಡನ ಸೋದರಳಿಯನಾಗಿದ್ದ ಆರೋಪಿ ಅತ್ತೆಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದ. ಈ ವಿಷಯ ಯಾರಿಗೂ ಗೊತ್ತಾಗಿರಲಿಲ್ಲ. ನಂತರದಲ್ಲಿ ಗಂಡ, ಮಕ್ಕಳನ್ನು ಬಿಟ್ಟು ಬರುವಂತೆ ಅತ್ತೆಗೆ ಬಲವಂತ ಮಾಡಿದ್ದು, ಆಕೆ ಒಪ್ಪದಿದ್ದಾಗ ಕೊಲೆ ಮಾಡಿದ್ದಾನೆ. ಮಹಿಳೆಯ ಗಂಡನ ಅಕ್ಕನ ಮಗನಾಗಿರುವ ಆರೋಪಿ ಗಂಡ ಕೆಲಸಕ್ಕೆ ಹೋಗುತ್ತಿದ್ದಂತೆ ಮನೆಗೆ ಬಂದು ಕೃತ್ಯವಸಗಿದ್ದಾನೆ.
ಕೊಲೆ ನಂತರ ಚಿನ್ನದ ಸರ ಮತ್ತು ಮೊಬೈಲ್ ತೆಗೆದುಕೊಂಡಿದ್ದ ಆರೋಪಿ ಮೊಬೈಲ್ ಅನ್ನು ಕೆರೆಗೆ ಎಸೆದಿದ್ದ. ಬೈಕ್ ನಂಬರ್ ಪ್ಲೇಟ್ ಬದಲಿಸಿದ್ದ. ಅಲ್ಲದೆ ಕೊಲೆ ಮಾಡಲು ಬರುವಾಗ ಮತ್ತು ಹೋಗುವಾಗ ಬಟ್ಟೆಗಳನ್ನು ಕೂಡ ಬದಲಿಸಿದ್ದ. ಆದರೆ, ಮಹಿಳೆಯ ಚಿನ್ನದ ಸರ ಅಡವಿಡಲು ಹೋದಾಗ ಸಿಕ್ಕಿ ಬಿದ್ದಿದ್ದಾನೆ ಎನ್ನಲಾಗಿದೆ.