ಶಿರಸಿ: ಹಣದ ಆಸೆಗಾಗಿ ಮಾಲೀಕನನ್ನೇ ಕೊಲೆ ಮಾಡಿದ ಮೂವರು ಆರೋಪಿಗಳನ್ನು ಉತ್ತರ ಕನ್ನಡ ಜಿಲ್ಲೆ ಶಿರಸಿಯ ಬನವಾಸಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಘಟನೆ ನಡೆದ 42 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಲಾಗಿದೆ.
ಎರಡು ದಿನಗಳ ಹಿಂದೆ ಶಿರಸಿಯ ವಡ್ಡಿನಕೊಪ್ಪ ಅರಣ್ಯ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿತ್ತು. ಪ್ರಾಥಮಿಕ ಮಾಹಿತಿಯಲ್ಲಿ ಕೊಲೆ ಎಂದು ಗೊತ್ತಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಕೊಲೆಯಾದ ವ್ಯಕ್ತಿಯ ಗುರುತು ಪತ್ತೆ ಮಾಡಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಹೊಸಗೆಕಜ್ಜೇನಹಳ್ಳಿಯ ಅಶೋಕ ಉಪ್ಪಾರ್(48) ಕೊಲೆಯಾದ ವ್ಯಕ್ತಿ. ಅವರ ಬಳಿ ಕೆಲಸ ಮಾಡಿಕೊಂಡಿದ್ದ ಕಿರಣ್, ನಿರಂಜನ್, ಗುಡ್ಡಪ್ಪ ಬಂಧಿತ ಆರೋಪಿಗಳಾಗಿದ್ದಾರೆ.
ಮೃತ ವ್ಯಕ್ತಿ ಹಾಗೂ ಆರೋಪಿಗಳು ಒಂದೇ ಗ್ರಾಮದವರಾಗಿದ್ದಾರೆ. ಅಶೋಕ ಉಪ್ಪಾರ ಅವರ ಬಳಿ ಆರೋಪಿಗಳು ಹಣ ಕೇಳಿದ್ದರು. ಸೆಪ್ಟೆಂಬರ್ 13ರಂದು ಕಿರಣ್ ಮಾಲೀಕ ಅಶೋಕ್ ಅವರನ್ನು ಗದ್ದೆ ಕೆಲಸದ ಬಳಿ ಕರೆದುಕೊಂಡು ಹೋಗಿದ್ದಾನೆ. ಅಲ್ಲಿಂದ ಬಾಡಿಗೆ ಕಾರ್ ಪಡೆದು ಹಾನಗಲ್ ತಾಲೂಕಿನ ಕೊಂಡಜಿ ಕ್ರಾಸ್ ಬಳಿ ಹೋಗಿದ್ದು, ಅಲ್ಲಿ ಉಳಿದ ಆರೋಪಿಗಳು ಸೇರಿಕೊಂಡು ಹಣ ಕೊಡುವಂತೆ ಅಶೋಕ ಅವರನ್ನು ಬೆದರಿಸಿ ದೊಣ್ಣೆಯಿಂದ ಹೊಡೆದಿದ್ದಾರೆ.
ಈ ವೇಳೆ ತಲೆಗೆ ಪೆಟ್ಟು ಬಿದ್ದು ಅಶೋಕ್ ಮೃತಪಟ್ಟಿದ್ದಾರೆ. ಒಂದು ದಿನ ಮೃತದೇಹವನ್ನು ಅಲ್ಲೇ ಬಿಟ್ಟಿದ್ದ ಆರೋಪಿಗಳು, ಬೇರೊಂದು ಬಾಡಿಗೆ ಕಾರ್ ಪಡೆದು ಮೃತದೇಹವನ್ನು ಶಿರಸಿ ಬಳಿಯ ವಡ್ಡಿನಕೊಪ್ಪ ಅರಣ್ಯ ಭಾಗದಲ್ಲಿ ಎಸೆದು ಪರಾರಿಯಾಗಿದ್ದಾರೆ.
ಶವ ದೊರೆತ ಸಮೀಪದಲ್ಲಿ ಆರೋಪಿಗಳ ಮೊಬೈಲ್ ಸಂಖ್ಯೆ ಕೊನೆಯ ಬಾರಿ ಆಕ್ಟೀವ್ ಆಗಿತ್ತು. ಮೃತರ ಗುರುತು ಪತ್ತೆ ಮಾಡಿದ್ದ ಪುತ್ರ ಕೆಲಸಗಾರರ ಮೇಲೆ ಅನುಮಾನ ವ್ಯಕ್ತಪಡಿಸಿದ್ದ. ಕೆಲಸಗಾರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ. ಆರೋಪಿಗಳನ್ನು ಬಂಧಿಸಲಾಗಿದ್ದು, ಎರಡು ಕಾರ್, ದ್ವಿಚಕ್ರವಾಹನ, ಮೊಬೈಲ್ ವಶಕ್ಕೆ ಪಡೆಯಲಾಗಿದೆ.