ಬೆಂಗಳೂರು: ಪತ್ನಿಯೊಂದಿಗೆ ಮಾತನಾಡಬೇಡ ಎಂದು ಹೇಳಿದ್ದಕ್ಕೆ ವ್ಯಕ್ತಿಯನ್ನು ಕೊಲೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸಾಯಿಬಾಬಾ ನಗರ ನಿವಾಸಿ, ಗೂಡ್ಸ್ ವಾಹನ ಚಾಲಕ ಕಾರ್ತಿಕ್(27), ಶಾಲಾ ವಾಹನ ಚಾಲಕ ಚೇತನ್ ಕುಮಾರ್(33) ಬಂಧಿತ ಆರೋಪಿಗಳು.
ಅಭಿಷೇಕ್ ಕೊಲೆಯಾದ ವ್ಯಕ್ತಿ. ಅಭಿಷೇಕ್ ಮತ್ತು ಆತನ ಸಹೋದರ ಅವಿನಾಶ್ ಹಿರಿಸಾವೆಯ ಸಹೋದರಿಯರನ್ನು ಮದುವೆಯಾಗಿದ್ದು, ಅವರಿಬ್ಬರಿಗೆ ಆರೋಪಿ ಕಾರ್ತಿಕ್ ಪರಿಚಿತನಾಗಿದ್ದ. ಆಗಾಗ ಮನೆಗೆ ಬಂದು ಹೋಗುತ್ತಿದ್ದಕಾರ್ತಿಕ್ ಫೋನ್ ನಲ್ಲಿ ಹೆಚ್ಚು ಮಾತನಾಡುತ್ತಿದ್ದ.
ನವೆಂಬರ್ 27ರಂದು ರಾತ್ರಿ 8 ಗಂಟೆ ಸುಮಾರಿಗೆ ಬ್ಯಾಡರಹಳ್ಳಿಯ ಅನುಪಮಾ ಶಾಲೆ ಬಳಿ ಕಾರ್ತಿಕ್ ನನ್ನು ಭೇಟಿಯಾಗಿದ್ದ ಅಭಿಷೇಕ್ ಪತ್ನಿಯೊಂದಿಗೆ ಮಾತನಾಡದಂತೆ ಹೇಳಿದ್ದಾನೆ. ಆಗ ಕಾರ್ತಿಕ್ ಗಲಾಟೆ ಮಾಡಿದ್ದು, ಕೈ ಕಡಗದಿಂದ ಕಾರ್ತಿಕ್ ಮತ್ತು ಚೇತನ್ ಮಾರಣಾಂತಿಕವಾಗಿ ಅಭಿಷೇಕ್ ಮೇಲೆ ಹಲ್ಲೆ ನಡೆಸಿದ್ದಾರೆ.
ಈ ವೇಳೆ ಜಗಳ ಬಿಡಿಸಲು ಹೋಗದ ಅವಿನಾಶ್ ಮೇಲೆಯೂ ಹಲ್ಲೆ ನಡೆಸಲಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಅಭಿಷೇಕ್ ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಅಭಿಷೇಕ್ ಮೃತಪಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರ್ತಿಕ್ ಮತ್ತು ಚೇತನ್ ಕುಮಾರ್ ನನ್ನು ಬಂಧಿಸಿದ್ದಾರೆ.