ಮಂಡ್ಯ: ನರಗಲು ಗ್ರಾಮದ ಮೋಹನ್ ಅಪಹರಣ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಂಡಿಗನವಿಲೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ನರಗಲು ಗ್ರಾಮದ ಮೋಹನ್ ಕೊಲೆ ಪ್ರಕರಣದಲ್ಲಿ ರಾಜು, ಕುಮಾರ್, ತೇಜಸ್ ಎಂಬುವರನ್ನು ಬಂಧಿಸಲಾಗಿದೆ ಎನ್ನಲಾಗಿದೆ.
ಕೊಲೆಯ ಹಿಂದೆ ಕುಣಿಗಲ್ ಮೂಲದ ರೌಡಿಶೀಟರ್ ಕೈವಾಡವಿರುವ ಶಂಕೆ ವ್ಯಕ್ತವಾಗಿದ್ದು, ರೌಡಿಶೀಟರ್ ಸೇರಿದಂತೆ 6 ಆರೋಪಿಗಳಿಗಾಗಿ ಶೋಧ ಕಾರ್ಯ ಕೈಗೊಳ್ಳಲಾಗಿದೆ. ಲೈವ್ ಲೈನ್ ಕ್ರಷರ್ ಕಾವಲಿಗೆ ರೌಡಿ ಶೀಟರ್ ಗಳನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಬಂಧಿತ ರಾಜು ರೌಡಿಶೀಟರ್ ಗಳನ್ನು ನೇಮಿಸಿದ್ದ.
ಮೇ 15 ರಂದು ನರಗಲು ಗ್ರಾಮದ ಮೋಹನ್ ಕೊಲೆ ನಡೆದಿತ್ತು. ಅಕ್ರಮ ಗಣಿಗಾರಿಕೆಗೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಮೋಹನನನ್ನು ಕೊಲೆ ಮಾಡಲಾಗಿತ್ತು. ಮೋಹನನ ಮೃತದೇಹದ ಹಿಮ್ಮಡಿಯನ್ನು ಕುಮಾರ ಕತ್ತರಿಸಿ ಹಾಕಿದ್ದ. ಸತ್ತ ಬಳಿಕ ದೆವ್ವವಾಗಿ ಕಾಣಬಾರದೆಂದು ಹಿಮ್ಮಡಿ ಕತ್ತರಿ ಹಾಕಲಾಗಿತ್ತು. ಸತ್ತ ಬಳಿಕ ದೆವ್ವವಾಗಿ ಕಾಡಬಾರದು ಎಂದು ಹಿಮ್ಮಡಿಗೆ ಕತ್ತರಿಸಿದ್ದರು. ನಂತರ ಮೃತದೇಹವನ್ನು ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಬಂಟರ ತಾಳಾಳು ಬಳಿ ಮೃತದೇಹವನ್ನು ದಫನ್ ಮಾಡಿದ್ದರು.
ಆರೋಪಿ ಕುಮಾರ್ ಜಮೀನಿನಲ್ಲಿ ರಾಜು ಕ್ರಷರ್ ತೆರೆದಿದ್ದರು. ಮೇ 10 ರಂದು ಗಣಿ ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಅಕ್ರಮ ಗಣಿ ಕ್ರಷರ್ ಮೇಲೆ ದಾಳಿ ನಡೆಸಿದ್ದರು. ದಾಳಿಯ ಬಳಿಕ ಅಕ್ರಮ ಗಣಿಗಾರಿಕೆಯನ್ನು ಅಧಿಕಾರಿಗಳು ಮುಚ್ಚಿಸಿದ್ದರು. ಇದರ ಹಿಂದೆ ಮೋಹನನ ಪಾತ್ರವಿದೆ ಎಂದು ಕುಮಾರ್ ಶಂಕಿಸಿದ್ದ. ಹೀಗಾಗಿ ಮೋಹನನನ್ನು ಅಪಹರಿಸಿ ಆರೋಪಿಗಳು ಕೊಲೆ ಮಾಡಿದ್ದರೆನ್ನಲಾಗಿದೆ. ಬಿಂಡಿಗನವಿಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.