
ಶಿವಮೊಗ್ಗ: ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಭದ್ರಾವತಿಯಲ್ಲಿ ಶುಕ್ರವಾರ ತಡರಾತ್ರಿ ರಾತ್ರಿ ಯುವಕನೊಬ್ಬನ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಭದ್ರಾವತಿ ತಾಲೂಕು ಹಳೆಕೋಡಿಹಳ್ಳಿ ನವೀನ್ ಕುಮಾರ್(21) ಕೊಲೆಯಾದ ಯುವಕ. ಚಾಕುವಿನಿಂದ ಇರಿದು ನವೀನ್ ಕುಮಾರ್ ನನ್ನು ಕೊಲೆ ಮಾಡಲಾಗಿದ್ದು, ಭದ್ರಾವತಿಯಲ್ಲಿ ಬಿಗುವಿನ ವಾತಾವರಣ ಉಂಟಾಗಿತ್ತು. ಎಸ್ಪಿ ಮಿಥುನ್ ಕುಮಾರ್ ನೇತೃತ್ವದಲ್ಲಿ ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಭದ್ರಾವತಿ ಅನ್ವರ್ ಕಾಲೋನಿ ನಿವಾಸಿಗಳಾದ ಮೊಹಮ್ಮದ್ ಸಾದಿಕ್, ಮೊಹಮ್ಮದ್ ಸುಹೇಲ್, ಜಟ್ಪಟ್ ನಗರದ ಪರ್ವೀಜ್, ಮೊಹಮ್ಮದ್ ಜಾವಿದ್ ಎಂಬವರನ್ನು ಬಂಧಿಸಿದ್ದಾರೆ. ಆರೋಪಿಗಳು ಹಾಗೂ ಕೊಲೆಯಾದ ನವೀನ್ ಕುಮಾರ್ ಸ್ನೇಹಿತರಾಗಿದ್ದು, ಅಪರಾಧ ಕೃತ್ಯಗಳಲ್ಲಿ ತೊಡಗಿದ್ದರು. ನವೀನ್ ಕುಮಾರ್ ಮೇಲೆ ದರೋಡೆ ಯತ್ನ, ಗಾಂಜಾ ಮಾರಾಟ ಸೇರಿ ಹಲವು ಪ್ರಕರಣಗಳಿವೆ. ಮೊಬೈಲ್ ಅಡವಿಟ್ಟ ವಿಚಾರದಲ್ಲಿ ಇವರ ನಡುವೆ ಹಣಕಾಸಿನ ವಿಚಾರಕ್ಕೆ ಜಗಳವಾಗಿದ್ದು, ಈ ವೇಳೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.