ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರವಾಗಿ ಶಾಸಕ ಎಸ್.ಟಿ.ಸೋಮಶೇಖರ್ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಶಸಕ ಮುನಿರತ್ನ ಹಿಂದೆ ಯಡಿಯೂರಪ್ಪನವರನ್ನು ಬದಲಾಯಿಸಿದಾಗ ಮಾತನಾಡದವರು ಈಗ ಮೈತ್ರಿ ಬಗ್ಗೆ ಯಾಕೆ ಮಾತನಾಡುತ್ತಿದ್ದಾರೆ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುನಿರತ್ನ, ಯಡಿಯೂರಪ್ಪ ಅವರನ್ನು ಅಂದು ಸಿಎಂ ಸ್ಥಾನದಿಂದ ಕೆಳಗಿಳಿಸಿದಾಗ ಯಾರೂ ಮಾತನಾಡಲಿಲ್ಲ. ಯಡಿಯೂರಪ್ಪ ಬದಲಾವಣೆ ಬಗ್ಗೆ ಕೇಳದವರು ಇಂದು ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಯಾಕೆ ಕೇಳುತ್ತಾರೆ? ಹೈಕಮಾಂಡ್ ನಮ್ಮನ್ನು ಒಂದು ಮಾತು ಕೇಳಬಹುದಿತ್ತು ಎಂದು ಈಗ ಯಾಕೆ ಹೇಳುತ್ತೀರಿ? ಎಂದು ಕೇಳಿದರು.
ಸರಿಯಾದ ಸಮಯಕ್ಕೆ ಸರಿಯಾದ ನಿರ್ಧಾರವನ್ನು ಬಿಜೆಪಿ ಹೈಕಮಾಂಡ್ ಮಾಡಿದೆ ಎಂದು ಮೈತ್ರಿಯನ್ನು ಸಮರ್ಥಿಸಿಕೊಂಡರು.
ಇದೇ ವೇಳೆ ಕಾಂಗ್ರೆಸ್ ನಲ್ಲಿ ಹಲವರಿಗೆ ಅಸಮಾಧಾನವಿರುವ ವಿಚಾರವಾಗಿ ಮತನಾಡಿದ ಮುನಿರತ್ನ, ಕಾಂಗ್ರೆಸ್ ನಲ್ಲಿ ನೆಂಟರು ಜಾಸ್ತಿ ಅಕ್ಕಿ ಕಡಿಮೆ ಆಗಿದೆ. ಐದು ಕೆಜಿ ಅಕ್ಕಿಯಾದರೂ ಸಿಗುತ್ತಾ ಎಂದು ಲೆಟರ್ ಹೆಡ್ ಹಿಡಿದು ನಿಂತಿದ್ದಾರೆ. ಸಿಕ್ಕಿಲ್ಲ ಎಂದರೆ ಪಕ್ಕದ ಮನೆಯಲ್ಲಿ ಸಿಗುತ್ತಾ ಅಂತಾ ಕಾಯುತ್ತಾರೆ. ಈಗ ಅಲ್ಲಿಯೂ ಅಕ್ಕಿ ಇಲ್ಲ ಎಂಬುದು ಗೊತ್ತಾಗುತ್ತಿದೆ ಎಂದು ವ್ಯಂಗ್ಯವಾಡಿದರು.’