ಬೆಂಗಳೂರು: ಮಾಜಿ ಸಚಿವ, ಬಿಜೆಪಿ ಶಾಸಕ ಮುನಿರತ್ನ ಅವರಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಜೆಡಿಎಸ್ ಮುಖಂಡ ಮತ್ತು ಅವರ ಪತ್ನಿಯ ಕೊಲೆಗೆ ಯತ್ನಿಸಿದ ಆರೋಪದ ಮೇಲೆ ನಂದಿನಿ ಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಇದು ಸಿಐಡಿಗೆ ವರ್ಗಾವಣೆಯಾಗುವ ಸಾಧ್ಯತೆ ಇದೆ.
ಲಗ್ಗೆರೆಯ ನರಸಿಂಹಸ್ವಾಮಿ ಲೇಔಟ್ ನಿವಾಸಿ ನಾರಾಯಣಸ್ವಾಮಿ ಈ ಬಗ್ಗೆ ದೂರು ನೀಡಿದ್ದಾರೆ. ದೂರಿನ ಮೇರೆಗೆ ಮುನಿರತ್ನ, ಜೆಪಿ ವಾರ್ಡ್ ನ ಸುನಂದಮ್ಮ, ಯಶವಂತಪುರದ ವೆಂಕಟೇಶ, ಲಕ್ಷ್ಮಮ್ಮ, ಜಯಮ್ಮ, ಲತಾ ಮೊದಲಾದವರ ವಿರುದ್ಧ ಕೇಸು ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಬಿಬಿಎಂಪಿ ಮಾಜಿ ಸದಸ್ಯೆ ಮಂಜುಳಾ ಎನ್. ಸ್ವಾಮಿಯವರ ಖಾಸಗಿ ವಿಡಿಯೋ ರೆಕಾರ್ಡ್ ಮಾಡಿಕೊಡಲು ಖಾಸಗಿ ವಾಹಿನಿಗೆ ಸುಪಾರಿ ಕೊಟ್ಟಿದ್ದರು. 2018ರಿಂದ ನಿರಂತರವಾಗಿ ಮಂಜುಳಾ ಮತ್ತು ನನ್ನ ಕೊಲೆಗೆ ಯತ್ನಿಸಿದ್ದಾರೆ. ಈ ಬಗ್ಗೆ ಸ್ಥಳೀಯ ಠಾಣೆಗೆ ದೂರು ಕೊಟ್ಟರೂ ಬೆದರಿಸಿ ವಾಪಸ್ ತೆಗೆದುಕೊಳ್ಳುವಂತೆ ಮಾಡಿದ್ದಾರೆ. ಈ ಎಲ್ಲದಕ್ಕೂ ಸಾಕ್ಷ್ಯಗಳಿವೆ ಎಂದು ನಾರಾಯಣಸ್ವಾಮಿ ಆರೋಪಿಸಿದ್ದಾರೆ.
2018 ರಲ್ಲಿ ನನ್ನ ಮೇಲೆ, ಪತ್ನಿ ಮೇಲೆ ಅವರ ಬೆಂಬಲಿಗರ ಬಿಟ್ಟು ಹಲ್ಲೆ ಮಾಡಿಸಿ ಮಾನಸಿಕ ಹಿಂಸೆ ನೀಡಿದ್ದರು. ಕಾರ್ ನಲ್ಲಿ ದೇವಸ್ಥಾನಕ್ಕೆ ಹೋಗುವಾಗ ಬೆಂಬಲಿಗರನ್ನು ಕಳುಹಿಸಿ ಕೊಲೆ ಮಾಡಲು ಸೂಚಿಸಿದ್ದರು. 2023ರ ವಿಧಾನಸಭೆ ಚುನಾವಣೆಯಲ್ಲಿ ರಾಜರಾಜೇಶ್ವರಿ ನಗರದ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ಹೋದಾಗ ತಡೆದಿದ್ದರು. ಮುನಿರತ್ನ ಅವರ ಒತ್ತಡದಿಂದ ಪೀಣ್ಯ ಪೊಲೀಸರು ರೌಡಿ ಪಟ್ಟಿ ತೆರೆದಿದ್ದರು. ಹೀಗಾಗಿ ಮುನಿರತ್ನ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರು ನೀಡಿದ್ದಾರೆ ಎನ್ನಲಾಗಿದೆ.
ಇನ್ನು ಬಿಬಿಎಂಪಿ ಮಾಜಿ ಸದಸ್ಯ ವೇಲು ನಾಯ್ಕರ್ ಗೆ ಜಾತಿ ನಿಂದನೆ ಮಾಡಿದ ಪ್ರಕರಣದಲ್ಲಿ ಮುನಿರತ್ನ ವಿರುದ್ಧ ನ್ಯಾಯಾಲಯಕ್ಕೆ ಸಿಐಡಿ ಆರೋಪ ಪಟ್ಟಿ ಸಲ್ಲಿಸಿದೆ. ನಿಂದನೆ ಮಾಡಿರುವ ಧ್ವನಿ ಮುನಿರತ್ನ ಅವರದೇ ಎಂದು ವಿಧಿ ವಿಜ್ಞಾನ ಪ್ರಯೋಗಾಲಯ ವರದಿಯಲ್ಲಿ ಸಾಬೀತಾಗಿದೆ. ಮುನಿರತ್ನ ವಿರುದ್ಧ ಸಿಸಿಹೆಚ್ 82ನೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಿಐಡಿ ಅಧಿಕಾರಿಗಳ ದೋಷಾರೋಪಟ್ಟಿ ಸಲ್ಲಿಸಿದ್ದಾರೆ.