ಬೆಂಗಳೂರು: ಬಿಜೆಪಿ ಶಾಸಕ ಮುನಿರತ್ನ ತನ್ನ ವಿರುದ್ಧ ಕೇಳಿಬಂದಿರುವ ಆರೋಪಗಳನ್ನು ಅಲ್ಲಗಳೆದಿದ್ದು, ತಾನು ಎಲ್ಲಿಯೂ ನಾಪತ್ತೆಯಾಗಿಲ್ಲ, ತಲೆಮರೆಸಿಕೊಳ್ಳಲು ನಾನೇನು ಅಂತಹ ಪಾಪ, ಅಪರಾಧವನ್ನೂ ಮಾಡಿಲ್ಲ ಎಂದು ಕಿಡಿಕಾರಿದ್ದಾರೆ.
ಗುತ್ತಿಗೆದಾರ ಚಲುವರಾಜುಗೆ ಜೀವ ಬೆದರಿಕೆ ಹಾಗೂ ಮಾಜಿ ಕಾರ್ಪೊರೇಟರ್ ಗೆ ಜಾತಿ ನಿಂದನೆ, ಅವಾಚ್ಯ ಶಬ್ಧಗಳಿಂದ ನಿಂದಿಸಿದ ಆರೋಪದಲ್ಲಿ ಮುನಿರತ್ನ ವಿರುದ್ಧ ವೈಯ್ಯಾಲಿ ಕಾವಲ್ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದು, ಶಾಸಕರಿಗೆ ಬಂಧನ ಭೀತಿ ಎದುರಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿರುವ ಶಾಸಕ ಮುನಿರತ್ನ, ನಾನು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರ್ಪಡೆಯಾದಾಗಿನಿಂದ ನನ್ನ ವಿರುದ್ಧ ಒಂದಲ್ಲ ಒಂದು ರೀತಿ ಷಡ್ಯಂತ್ರ ನಡೆಸುತ್ತಿದ್ದಾರೆ. ನನ್ನ ವಿರುದ್ಧ ವಿಡಿಯೋ ಮಾಡಲು ಆಗಿಲ್ಲ ಎಂದು ಆಡಿಯೋ ಮಾಡಿ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಚಲುವರಾಜು ಈ ಹಿಂದೆ ನನಗೆ ರಕ್ಷಣೆ ನೀಡುವಂತೆ ಕೇಳಿ ನನ್ನ ಬಳಿ ಬಂದಿದ್ದವರು. ಒಂದು ತಿಂಗಳ ಹಿಂದಷ್ಟೇ ನನ್ನನ್ನು ಶ್ಲಾಘಿಸಿದ್ದರು. ನನ್ನನ್ನೇ ದೇವರು ಎಂದು ಹೇಳುತ್ತಿದ್ದವರು ಈಗ ನನ್ನ ವಿರುದ್ಧವೇ ಆರೋಪಗಳನ್ನು ಮಾಡಿ ದೂರು ನೀಡುತ್ತಿದ್ದಾರೆ. ಇದೆಲ್ಲವೂ ಕಾಂಗ್ರೆಸ್ ನವರ ಕೈವಾಡ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.