
ಬೆಂಗಳೂರು: ಆರ್.ಆರ್. ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಅತ್ಯಾಚಾರ ಆರೋಪ ತನಿಖೆಯಲ್ಲಿ ಸಾಬೀತಾಗಿದೆ ಎಂದು ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಎಸ್ಐಟಿ ಆರೋಪ ಪಟ್ಟಿ ಸಲ್ಲಿಸಿದೆ.
ತಮ್ಮ ವಿರೋಧಿಗಳನ್ನು ಹೆಚ್ಐವಿ, ಏಡ್ಸ್ ಪೀಡಿತರ ಮೂಲಕ ಹನಿಟ್ರ್ಯಾಪ್ ಬಲೆಗೆ ಬೀಳಿಸಿ ಏಡ್ಸ್ ಹರಡಲು ದುಷ್ಕೃತ್ಯ ಎಸಗಿರುವುದು ಸಾಬೀತಾಗಿದೆ ಎಂದು ಎಸ್ಐಟಿ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ. ಮುನಿರತ್ನ ವಿರುದ್ಧ 2481 ಪುಟಗಳ ಆರೋಪ ಪಟ್ಟಿಯನ್ನು ಸಲ್ಲಿಸಲಾಗಿದೆ.
ಸೆಪ್ಟೆಂಬರ್ ನಲ್ಲಿ ಬಿಜೆಪಿ ಕಾರ್ಯಕರ್ತೆಯೊಬ್ಬರು ಕಗ್ಗಲಿಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮುನಿರತ್ನ ಸಹಚರರು ಅತ್ಯಾಚಾರ ಎಸಗಿದ್ದಾಗಿ ಆರೋಪ ಮಾಡಿದ್ದರು. ಇದರ ಬೆನ್ನಲ್ಲೇ ಮುನಿರತ್ನ ಅವರನ್ನು ಬಂಧಿಸಲಾಗಿದ್ದು, ರಾಜ್ಯ ಸರ್ಕಾರ ತನಿಖೆಗೆ ಎಸ್ಐಟಿ ರಚಿಸಿದ್ದು, ಪ್ರಕರಣದ ತನಿಖೆ ಪೂರ್ಣಗೊಳಿಸಿ ಎಸ್ಐಟಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದೆ.
ಅತ್ಯಾಚಾರ, ಜಾತಿ ನಿಂದನೆ, ಬೆದರಿಕೆ ಹಾಗೂ ಹನಿಟ್ರ್ಯಾಪ್ ಸೇರಿ ನಾಲ್ಕು ಪ್ರಕಾರಗಳು ಮುನಿರತ್ನ ವಿರುದ್ಧ ದಾಖಲಾಗಿದ್ದು, ಇವುಗಳಲ್ಲಿ ಜಾತಿ ನಿಂದನೆ ಮತ್ತು ಅತ್ಯಾಚಾರ ಪ್ರಕರಣಗಳ ತನಿಖೆ ಪೂರ್ಣಗೊಳಿಸಿ ಎಸ್ಐಟಿ ಆರೋಪಟ್ಟಿ ಸಲ್ಲಿಸಿದೆ. ಇನ್ನೂ ಎರಡು ಪ್ರಕರಣಗಳಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಬಾಕಿ ಇದೆ.