ಬೆಂಗಳೂರು: ಮತದಾರರಿಗೆ ಸೀರೆ ಹಂಚಿಕೆ ಆರೋಪದಡಿ ತೋಟಗಾರಿಕೆ ಸಚಿವ ಮುನಿರತ್ನ ಮತ್ತು ಇತರರ ವಿರುದ್ಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಆರ್.ಆರ್. ನಗರ ವಿಧಾನಸಭಾ ಕ್ಷೇತ್ರದ ಜಾಗೃತ ದಳ ಅಧಿಕಾರಿ ಮನೋಜ್ ಕುಮಾರ್ ಅವರು ಸೀರೆಗಳ ಸಮೇತ ದೂರು ನೀಡಿದ್ದಾರೆ. ಮತದಾರರಿಗೆ ಆಮಿಷ ಒಡ್ಡಿದ ಆರೋಪದಡಿ ಸಚಿವ ಮುನಿರತ್ನ ಮತ್ತು ಬಿಜೆಪಿ ಮುಖಂಡ ವಿ.ಸಿ. ಚಂದ್ರು ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಗಳಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು ಎಂದು ಹೇಳಲಾಗಿದೆ.
ವಾರ್ಡ್ ನಂಬರ್ 160 ರ ಬಂಗಾರಪ್ಪನಗರದ ಗ್ಲೋಬಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಮೀಪ ಸೀರೆ ಹಂಚಿಕೆ ಮಾಡುತ್ತಿರುವ ಮಾಹಿತಿ ಪಡೆದ ಜಾಗೃತ ದಳ ಅಧಿಕಾರಿ ಮನೋಜ್ ಕುಮಾರ್ ನೇತೃತ್ವದ ತಂಡ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದು, ರಸ್ತೆ ಬದಿಯಲ್ಲಿ ಸೀರೆಗಳು ಬಿದ್ದಿದ್ದು, ಅವುಗಳ ಮೇಲೆ ಆರ್.ಆರ್. ನಗರ ವಿಧಾನಸಭಾ ಕ್ಷೇತ್ರ ಬಿಜೆಪಿಯೇ ಭರವಸೆ ಎಂದು ಮುದ್ರಿಸಲಾಗಿತ್ತು. ಸಚಿವ ಮುನಿರತ್ನ ಮತ್ತು ವಿ.ಸಿ. ಚಂದ್ರು ಫೋಟೋಗಳು ಅವುಗಳ ಮೇಲಿದ್ದವು. ಸೀರೆಗಳನ್ನು ಜಪ್ತಿ ಮಾಡಿ ಪೊಲೀಸರಿಗೆ ಒಪ್ಪಿಸಲಾಗಿದೆ.