ಬೆಂಗಳೂರು: ಮಾಜಿ ಸಚಿವ, ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಎರಡು ಎಫ್ಐಆರ್ ದಾಖಲಾಗಿದ್ದು, ಬಂಧನ ಭೀತಿ ಎದುರಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಮುನಿರತ್ನ ನಾಪತ್ತೆಯಾಗಿದ್ದಾರೆ.
ಗುತ್ತಿಗೆದಾರನಿಗೆ ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಗೂ ಮಾಜಿ ಕಾರ್ಪೊರೇಟರ್ ಗೆ ಜಾತಿ ನಿಂದನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ವೈಯ್ಯಾಲಿ ಕಾವಲ್ ಪೊಲೀಸ್ ಠಾಣೆಯಲ್ಲಿ ಶಾಸಕ ಮುನಿರತ್ನ ವಿರುದ್ಧ ಎರಡು ಎಫ್ಐಆರ್ ದಾಖಲಾಗಿದೆ.
ಮುನಿರತ್ನ, ಮುನಿರತ್ನ ಆಪ್ತ ಸಹಾಯಕ ವಿ.ಜಿ ಕುಮಾರ್, ಸೆಕ್ಯೂರಿಟಿ ಅಭಿಷೇಕ್ ಹಾಗೂ ವಸಂತ್ ಕುಮಾರ್ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ. ಕೇಸ್ ದಾಖಲಾಗುತ್ತಿದ್ದಂತೆ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡಿರುವ ಮುನಿರತ್ನ ನಾಪತ್ತೆಯಾಗಿದ್ದಾರೆ. ಪೊಲೀಸರು ಹುಡುಕಾಟ ನಡೆಸಿದ್ದಾರೆ. ಇನ್ನೊಂದೆಡೆ ಮುನಿರತ್ನ ಬಗ್ಗೆ ಬೆಂಗಳೂರಿನ ಕೇಂದ್ರ ವಿಭಾಗ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.