ಬೆಂಗಳೂರು: ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಸೇರಲು ನನಗೆ ಭಾರಿ ಬೇಡಿಕೆ ಇತ್ತು. ಆದರೆ ನಾನು ಹೋಗಲಿಲ್ಲ ಎಂದು ಮಾಜಿ ಸಚಿವ ಮುನಿರತ್ನ ಹೇಳಿದ್ದಾರೆ.
ಲೋಕಸಭೆ ಚುನಾವಣೆ ಸಿದ್ಧತೆ ಹಿನ್ನೆಲೆಯಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಬೆಂಗಳೂರು ಸೆಂಟ್ರಲ್ ಬಿಜೆಪಿ ಮುಖಂಡರು, ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದ್ದಾರೆ.
ನನಗೆ ಕಾಂಗ್ರೆಸ್ ಪಕ್ಷದಲ್ಲಿ ಅನೇಕ ಸ್ನೇಹಿತರಿದ್ದಾರೆ. ಅವರು ನೀಡಿದ ಮಾಹಿತಿಯ ಪ್ರಕಾರ ಸಿದ್ದರಾಮಯ್ಯನವರಿಗೆ ಪೂರ್ಣಾವಧಿ ಸಿಎಂ ಸ್ಥಾನ ನೀಡುವ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ನಾಯಕರು ಭರವಸೆ ನೀಡಿದ್ದಾರೆ. ಇದಾದ ನಂತರವೇ ಸಿದ್ದರಾಮಯ್ಯ ಗ್ಯಾರಂಟಿ ಯೋಜನೆಗಳ ಕಾರ್ಡ್ ಗೆ ಸಹಿ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಸ್ನೇಹಿತರು ನೀಡಿರುವ ಮಾಹಿತಿಯ ಪ್ರಕಾರ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ನಾಯಕರಾದ ಕೆ.ಸಿ. ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲಾ ನೇತೃತ್ವದಲ್ಲಿ ಸಭೆ ನಡೆದಿದ್ದು, ಗ್ಯಾರಂಟಿ ಕಾರ್ಡ್ ಗೆ ಸಹಿ ಹಾಕುವ ಕುರಿತಾಗಿ ಚರ್ಚೆಯಾಗಿ ಡಿ.ಕೆ. ಶಿವಕುಮಾರ್ ಒಬ್ಬರೇ ಸಹಿ ಹಾಕುವ ತೀರ್ಮಾನಕ್ಕೆ ಬಂದಾಗ ಇದು ತಪ್ಪಾಗುತ್ತದೆ. ಸಿದ್ದರಾಮಯ್ಯನವರು ಕೂಡ ಸಹಿ ಮಾಡಬೇಕು ಎಂದು ಹೇಳಲಾಗಿದೆ. ಸಹಿ ಹಾಕುತ್ತೇನೆ. ಆದರೆ, ನನಗೆ ಐದು ವರ್ಷ ಅಧಿಕಾರ ನೀಡಬೇಕು ಎಂದು ಸಿದ್ದರಾಮಯ್ಯ ಹೇಳಿದ್ದು, ಇದಕ್ಕೆ ನಾಯಕರು ಒಪ್ಪಿಕೊಂಡ ನಂತರ ಗ್ಯಾರಂಟಿ ಕಾರ್ಡ್ ಗೆ ಸಿದ್ದರಾಮಯ್ಯ ಸಹಿ ಹಾಕಿದ್ದಾರೆ. ಹಾಗಾಗಿ ಮುಂದಿನ 5 ವರ್ಷ ಸಿದ್ಧರಾಮಯ್ಯ ಮುಖ್ಯಮಂತ್ರಿ ಎಂದು ಬೆಂಬಲಿಗರು ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನವರು ನಮ್ಮ ಸರ್ಕಾರದ ಅವಧಿಯಲ್ಲಿ ಪೇಸಿಎಂ ಎಂದು ತೇಜೋವಧೆ ಮಾಡಿದರು. 40% ಕಮಿಷನ್ ಆರೋಪ ಮಾಡಿದರು. ಅವತ್ತೇ ನಾವು ಸರಿಯಾದ ಉತ್ತರ ಕೊಡಬೇಕಿತ್ತು. ಇದು ಕಾಂಗ್ರೆಸ್ ಪಕ್ಷದ ಗೆಲುವು ಅಲ್ಲ. ನಮ್ಮ ಸ್ವಯಂಕೃತ ಅಪರಾಧ. ನಮ್ಮ ತಪ್ಪುಗಳೇ ಕಾರಣ. ಅವುಗಳ ಬಗ್ಗೆ ಈಗ ವಿಮರ್ಶೆ ಮಾಡಲು ಹೋಗಲ್ಲ ಎಂದು ಮುನಿರತ್ನ ಹೇಳಿದ್ದಾರೆ.