ಬೆಂಗಳೂರು: ಆರ್.ಆರ್. ನಗರ ಬಿಜೆಪಿ ಶಾಸಕ, ಮಾಜಿ ಸಚಿವ ಮುನಿರತ್ನ ಅವರ ವಿರುದ್ಧ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಅನುಮತಿ ಪಡೆಯದೆ ಅಕ್ರಮವಾಗಿ ಜಿಲೆಟಿನ್ ಸ್ಫೋಟಿಸಿದ ಆರೋಪ ಹಿನ್ನೆಲೆಯಲ್ಲಿ ಶಾಸಕ ಮುನಿರತ್ನ ಸೇರಿದಂತೆ ನಾಲ್ವರ ವಿರುದ್ಧ ದೂರು ದಾಖಲಿಸಲಾಗಿದೆ. ಯಲಹಂಕ ತಹಶೀಲ್ದಾರ್ ಅನಿಲ್ ಆರೋಳಕರ್ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಲಾಗಿದೆ.
ಸರ್ಕಾರಿ ಜಮೀನು ಸೇರಿದಂತೆ ಖಾಸಗಿ ಜಮೀನಿನಲ್ಲಿ ಕಲ್ಲು ಗಣಿಗಾರಿಕೆ ನಡೆಸಲಾಗಿದೆ. ಹುಣಸಮಾರನಹಳ್ಳಿ ಜಮೀನಿನಲ್ಲಿ ಗಣಿಗಾರಿಕೆ ವೇಳೆ ಜಿಲೆಟಿನ್ ಸ್ಪೋಟಿಸಲಾಗಿದೆ. ಬೆಂಗಳೂರು ಉತ್ತರ ತಾಲೂಕಿನ ಹುಣಸಮಾರನಹಳ್ಳಿ ಗ್ರಾಮದಲ್ಲಿ ಜಮೀನಿನಲ್ಲಿ ಜುಲೈ 10ರಂದು ಬ್ಲಾಸ್ಟಿಂಗ್ ಮಾಡಿ ಗಣಿಗಾರಿಕೆ ನಡೆಸಿದ ಆರೋಪ ಕೇಳಿ ಬಂದಿದೆ.
ಗಣಿಗಾರಿಕೆ ವಿರುದ್ಧ ಹುಣಸಮಾರನಹಳ್ಳಿ ಗ್ರಾಮಸ್ಥರು ಧರಣಿ ನಡೆಸಿದ್ದರು, ಗ್ರಾಮಸ್ಥರ ಧರಣಿ ಹಿನ್ನೆಲೆ ತಹಶೀಲ್ದಾರ್ ಸ್ಥಳ ಪರಿಶೀಲನೆ ನಡೆಸಿ ದೂರು ನೀಡಿದ್ದು, ಎಫ್ಐಆರ್ ದಾಖಲಿಸಲಾಗಿದೆ. ಹುಣಸಮಾರನಹಳ್ಳಿ ಹಾಗೂ ಸಣ್ಣಪ್ಪನಹಳ್ಳಿಯಲ್ಲಿ ಗಣಿಗಾರಿಕೆ ನಡೆಸಲಾಗಿದೆ.
ಆನಂದನ್ ಎ1, ಗಣೇಶ್ ಎ2, ರಾಧಮ್ಮ ಎ3, ಎ4 ಆರೋಪಿಯಾಗಿ ಶಾಸಕ ಮುನಿರತ್ನ ವಿರುದ್ಧ ದೂರು ದಾಖಲಿಸಲಾಗಿದೆ. ಆರೋಪಿಗಳ ವಿರುದ್ಧ ಸ್ಪೋಟಕ ಕಾಯ್ದೆ, ಕರ್ನಾಟಕ ಭೂ ಕಂದಾಯ ಕಾಯ್ದೆ ಅಡಿ ಕೇಸು ದಾಖಲಿಸಲಾಗಿದೆ.