ಬೆಂಗಳೂರು : ಆರ್.ಆರ್.ನಗರ ಕ್ಷೇತ್ರಕ್ಕೆ ಅನುದಾನ ಕಡಿತಗೊಳಿಸಿರುವ ಕ್ರಮ ಖಂಡಿಸಿ ಬಿಜೆಪಿ ಶಾಸಕ ಮುನಿರತ್ನ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಏಕಾಂಗಿ ಹೋರಾಟ ನಡೆಸಿದ ಮುನಿರತ್ನ ಬಳಿಕ ಅರಮನೆ ಮೈದಾನಲ್ಲಿದ್ದ ಡಿಸಿಎಂ ಡಿಕೆ ಶಿವಕುಮಾರ್ ಭೇಟಿಯಾಗಿದ್ದಾರೆ. ಈ ವೇಳೆ ಡಿಸಿಎಂ ಡಿಕೆಶಿ ಕಾಲಿಗೆ ಬಿದ್ದು ಮುನಿರತ್ನ ರಾಜರಾಜೇಶ್ವರಿ ನಗರಕ್ಕೆ ಅನುದಾನ ನೀಡುವಂತೆ ಮನವಿ ಸಲ್ಲಿಸಿದ್ದಾರೆ. ಡಿಸಿಎಂ ಕೂಡ ಶಾಸಕ ಮುನಿರತ್ನ ನೀಡಿದ ಮನವಿ ಸ್ವೀಕರಿಸಿ ಮುನಿರತ್ನ ಹೆಗಲ ಮೇಲೆ ಕೈ ಹಾಕಿ ಆತ್ಮೀಯವಾಗಿ ಮಾತನಾಡಿಸಿದ್ದಾರೆ.
ಮೊದಲು ವಿಧಾನಸೌಧದ ಮುಂಭಾಗ ಗಾಂಧಿ ಪ್ರತಿಮೆ ಬಳಿ ಬೆಂಬಲಿಗರ ಜೊತೆಗೂಡಿ ಶಾಸಕ ಮುನಿರತ್ನ ಧರಣಿ ನಡೆಸಿದ್ದರು . ಈ ವೇಳೆ ಶಾಸಕರನ್ನು ಹೊರತುಪಡಿಸಿ ಬೆಂಬಲಿಗರಿಗೆ ಧರಣಿ ನಡೆಸಲು ಅನುಮತಿಯಿರಲಿಲ್ಲ. ಈ ಹಿನ್ನೆಲೆಯಲ್ಲಿ ಮುನಿರತ್ನ ಬೆಂಬಲಿಗರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಮುನಿರತ್ನ ಪ್ರತಿಭಟನೆಗೆ ಮಾಜಿ ಸಿಎಂ ಯಡಿಯೂರಪ್ಪ ಕೂಡ ಸಾಥ್ ನೀಡಿದ್ದು, ಇದು ದ್ವೇಷದ ರಾಜಕಾರಣ. ಎಲ್ಲಾ ಕ್ಷೇತ್ರಗಳಂತೆ ಆರ್.ಆರ್.ನಗರ ಕ್ಷೇತ್ರಕ್ಕೂ ಅನುದಾನ ಕೊಡಬೇಕು. ಅನುದಾನ ಬಗ್ಗೆ ಮುಖ್ಯಮಂತ್ರಿ, ಡಿಸಿಎಂ ಜೊತೆ ಮಾತನಾಡುತ್ತೇನೆ. ಎಲ್ಲಾ ಶಾಸಕರಿಗೂ ಅನುದಾನ ನೀಡಬೇಕು ಎಂದು ವಿಧಾನಸೌಧದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.