ಚಾಮರಾಜನಗರ: ಚಾಮರಾಜನಗರ ಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆಗೆ ಗೈರು ಹಾಜರಾಗಿದ್ದ ಹಾಗೂ ಪಕ್ಷಾಂತರ ಮಾಡಿದ್ದ ನಾಲ್ವರು ನಗರಸಭೆ ಸದಸ್ಯರ ಸದಸ್ಯತ್ವವನ್ನು ಅನರ್ಹಗೊಳಿಸಿ ಜಿಲ್ಲಾಧಿಕಾರಿ ಸಿ.ಟಿ. ಶಿಲ್ಪಾ ನಾಗ್ ಅವರು ಆದೇಶಿಸಿದ್ದಾರೆ.
2024ರ ಸೆಪ್ಟೆಂಬರ್ 9ರಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಸದಸ್ಯರಿಗೆ ಪಕ್ಷದ ಅಭ್ಯರ್ಥಿಯ ಪರವಾಗಿ ಮತ ಹಾಕುವಂತೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪಿ. ಮರಿಸ್ವಾಮಿ ವಿಪ್ ಜಾರಿ ಮಾಡಿದ್ದರು. ಆದರೆ ಪಕ್ಷದ ಸದಸ್ಯರಾದ ಎಸ್.ಟಿ. ನೀಲಮ್ಮ, ಭಾಗ್ಯ, ಆರ್.ಪಿ. ನಂಜುಂಡಸ್ವಾಮಿ ಅವರು ಉಲ್ಲಂಘಿಸಿ ಚುನಾವಣೆಗೆ ಗೈರು ಹಾಜರಾಗಿದ್ದರು. ಮತ್ತೊಬ್ಬ ಸದಸ್ಯೆ ಬಿ.ಎಸ್. ಚಂದ್ರಕಲಾ ಬಿಜೆಪಿ ಅಭ್ಯರ್ಥಿ ಪರವಾಗಿ ಕೈ ಎತ್ತುವ ಮೂಲಕ ಮತ ಹಾಕಿದ್ದರು.
ಈ ಸಂಬಂಧ ಮರಿಸ್ವಾಮಿ ಮತ್ತು ಕಾಂಗ್ರೆಸ್ ಸದಸ್ಯ ಆರ್.ಎಂ. ರಾಜಪ್ಪ ಅವರು ವಿಪ್ ಉಲ್ಲಂಘನೆ ಮಾಡಿದ ನಾಲ್ವರ ಸದಸ್ಯತ್ವ ಅನರ್ಹಗೊಳಿಸಬೇಕು ಎಂದು ಕರ್ನಾಟಕ ಸ್ಥಳೀಯ ಪ್ರಾಧಿಕಾರಗಳ ಪಕ್ಷಾಂತರ ನಿಷೇಧ ಅಧಿನಿಯಮದ ಅಡಿ ದೂರು ನೀಡಿದ್ದರು.
ಈ ಸಂಬಂಧ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ವಾದ ವಿವಾದ ಆಲಿಸಿದ ಶಿಲ್ಪಾ ನಾಗ್ ಅವರು ನಾಲ್ವರು ಸದಸ್ಯರು ಉದ್ದೇಶಪೂರ್ವಕವಾಗಿ ಪಕ್ಷದ ವಿರುದ್ಧ ಮತ ಚಲಾಯಿಸಿರುವುದು ಮತ್ತು ಗೈರು ಹಾಜರಾಗಿರುವುದು ಸಾಬೀತಾಗಿದ್ದರಿಂದ ನಾಲ್ವರ ಸದಸ್ಯತ್ವವನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿದ್ದಾರೆ.