ಮಂಗಳೂರು: ಮಾಜಿ ಶಾಸಕ ಮೊಯಿದ್ದೀನ್ ಬಾವ ಸಹೋದರ, ಉದ್ಯಮಿ ಮುಮ್ತಾಜ್ ಅಲಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಸ್ಟರ್ ಮೈಂಡ್ ಅಬ್ದುಲ್ ಸತ್ತಾರ್ ನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರದ ಗಡಿಯಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಆರೋಪಿ ಅಬ್ದುಲ್ ಸತ್ತಾರ್ ನನ್ನು ಬಂಧಿಸಿ ಮಂಗಳೂರಿಗೆ ಕರೆತಂದಿದ್ದಾರೆ. ಹನಿಟ್ರ್ಯಾಪ್ ಪ್ರಕರಣದ ಪ್ರಮುಖ ಆರೋಪಿ ಅಬ್ದುಲ್ ಸತ್ತಾರ್, ಈ ಹಿಂದೆಯೂ ಹಲವರನ್ನು ಜಾಲಕ್ಕೆ ಬೀಳಿಸಿ ಸುಲಿಗೆ ಮಾಡಿದ್ದ.
ಮುಮ್ತಾಜ್ ಅಲಿ ಆತ್ಮಹತ್ಯೆ ಪ್ರಕರಣದ ಆರೋಪಿಗಳಾದ ಶಾಫಿ, ಮುಸ್ತಫಾ ನನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಎ1 ಆಯೀಷಾ ಅಲಿಯಾಸ್ ರೆಹಮತ್ ಹಾಗೂ ಆಕೆಯ ಪತಿ ಶೋಯಬ್ ಹಾಗೂ ಸಿರಾಜ್ ನನ್ನು ಅ.8ರಂದು ಪೊಲೀಸರು ಬಂಧಿಸಿದ್ದರು.
ಹಣಕ್ಕಾಗಿ ಮುಮ್ತಾಜ್ ಅಲಿಯನ್ನು ಬ್ಲ್ಯಾಕ್ ಮೇಲ್ ಮಾಡಿದ್ದ ಆರೋಪದಲ್ಲಿ ಕಾವೂರು ಠಾಣೆಯಲ್ಲಿ 6 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಮಹಿಳೆ ಹಾಗೂ ಗ್ಯಾಂಗ್ ನಿಂದ ಬ್ಲ್ಯಾಕ್ ಮೇಲ್ ಕಾರಣಕ್ಕೆ ಮುಮ್ತಾಜ್ ಅಲಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ದೂರು ದಾಖಲಾಗಿತ್ತು. ಅ.8ರಂದು ಅವರ ಶವ ಮಂಗಳೂರಿನ ಕೂಳೂರು ಸೇತುವೆ ಬಳಿ ಫಲ್ಗುಣಿ ನದಿಯಲ್ಲಿ ಪತ್ತೆಯಾಗಿತ್ತು.