
ರಾಯಚೂರು: ರಾಜ್ಯದಲ್ಲಿ ಮಕ್ಕಳಲ್ಲಿ ಮಂಗನ ಬಾವು ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ರಾಯಚೂರಿನ ಸರ್ಕಾರಿ ಶಾಲೆಯೊಂದರಲ್ಲಿ 150 ಮಕ್ಕಳಲ್ಲಿ ಈ ಕಾಯಿಲೆ ಪತ್ತೆಯಾಗಿದ್ದು, ಪೋಷಕರು ಕಂಗಾಲಾಗಿದ್ದಾರೆ.
ಲಿಂಗಸಗೂರು ತಾಲೂಕಿನ ನೀರಲಕೇರಿ ಗ್ರಾಮದ ನೀರಲಕೇರಿ ಸರಕಾರಿ ಶಾಲೆಯ 150ಕ್ಕೂ ಹೆಚ್ಚು ಮಕ್ಕಳಲ್ಲಿ ಮಂಗನ ಬಾವು ಕಾಣಿಸಿಕೊಂಡಿದೆ. ಮಂಗನ ಬಾವು ಕಾಯಿಲೆ ಒಬ್ಬರಿಂದ ಒಬ್ಬರಿಗೆ ಹರಡುವುದರಿಂದ ಇಡೀ ಶಾಲೆಯ ಮಕ್ಕಳಿಗೂ ಆತಂಕ ಎದುರಾಗಿದೆ.
ಮಂಗನ ಬಾವಿನಿಂದ ಬಳಲುತ್ತಿರುವ ಮಕ್ಕಳಿಗೆ ಆನೆಹೊಸೂರು, ಲಿಂಗಸಗೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಪ್ರಸ್ತುತ ಆರೋಗ್ಯ ಇಲಾಖೆ ಅಧಿಕಾರಿಗಳು ಗ್ರಾಮದಲ್ಲಿ ಮೊಕ್ಕಾಂ ಹೂಡಿದ್ದು, ಶಾಲೆಯ 300ಕ್ಕೂ ಹೆಚ್ಚು ವಿದ್ಯಾರ್ಥಿಗಳ ಹಾಗೂ ಗ್ರಾಮಸ್ಥರ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ.
ಪೋಷಕರು ಆತಂಕ ಪಡಬೇಕಿಲ್ಲ. ಸಾಮಾನ್ಯವಾಗಿ ಫೆಬ್ರವರಿ ಹಾಗೂ ಮಾರ್ಚ್ ತಿಂಗಳಿನಲ್ಲಿ ಈ ಕಾಯಿಲೆ ಬರುವುದು ಸಹಜ. ಮೂರು-ನಾಲ್ಕು ದಿನಗಳಲ್ಲಿ ಬಾವು ವಾಸಿಯಾಗುತ್ತದೆ. ಶಾಲಾ ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುರೇಂದ್ರಬಾಬು ತಿಳಿಸಿದ್ದಾರೆ.