ಬಸ್ ನಿಲ್ದಾಣ, ರೈಲು ನಿಲ್ದಾಣ ಸೇರಿ ಹಲವು ಸಾರ್ವಜನಿಕ ಸ್ಥಳಗಳಲ್ಲಿ ಕಳ್ಳತನ ಮಾಡುವವರ ಸಂಖ್ಯೆ ಜಾಸ್ತಿಯಿರುತ್ತದೆ. ನಾವು ಮರೆತರೂ ಅದನ್ನು ಮರಳಿಸುವವರ ಸಂಖ್ಯೆ ತುಂಬ ವಿರಳವಾಗಿರುತ್ತದೆ. ಆದರೆ, ಮುಂಬೈನಲ್ಲಿರುವ ‘ಛತ್ರಪತಿ ಶಿವಾಜಿ ಮಹಾರಾಜ್ ವಿಮಾನ ನಿಲ್ದಾಣʼದ (ಸಿಎಸ್‌ಎಂಐಎ) ಸಿಬ್ಬಂದಿಯೊಬ್ಬರು ತಮಗೆ ಅನಾಯಾಸವಾಗಿ ಸಿಕ್ಕ 20 ಸಾವಿರ ರೂಪಾಯಿಯನ್ನು ಅಧಿಕಾರಿಗಳಿಗೆ ಮರಳಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.
BIG NEWS: ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ವೀಕ್ಷಣೆಗೆ ಸಚಿವರು, ಶಾಸಕರಿಗೆ ವ್ಯವಸ್ಥೆ
ಹೌದು, ವಿಮಾನ ನಿಲ್ದಾಣದಲ್ಲಿ ಪ್ಯಾಸೆಂಜರ್‌ಗಳನ್ನು ನಿರ್ವಹಿಸುವ ಸಿಬ್ಬಂದಿಯಾದ ಮಾಸಿ ಉಲ್ಲಾ ಖಾನ್ ಅವರನ್ನು ಟರ್ಮಿನಲ್ ಒಂದರಲ್ಲಿ ನಿಯೋಜಿಸಿದ್ದು, ಅವರಿಗೆ ನೆಲದ ಮೇಲೆ 20 ಸಾವಿರ ರೂ. ಸಿಕ್ಕಿದೆ. ಹಣ ಸಿಕ್ಕ ಕೂಡಲೇ ಅದನ್ನು ಜೇಬಿಗೆ ಇಳಿಸುವ ಬದಲು ಖಾನ್ ಅವರು ಕೂಡಲೇ ಅಷ್ಟೂ ಹಣವನ್ನು ವಿಮಾನ ನಿಲ್ದಾಣದ ಸಿಐಎಸ್‌ಎಫ್ ಅಧಿಕಾರಿಗೆ ನೀಡುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ಅಲ್ಲದೆ, ಸಿಕ್ಕ ಹಣವನ್ನು ವಾಪಸ್ ನೀಡಿದ ಸಿಬ್ಬಂದಿಯ ಪ್ರಾಮಾಣಿಕತೆ ಮೆಚ್ಚಿ ವಿಮಾನ ನಿಲ್ದಾಣದ ಅಧಿಕಾರಿಗಳು ಒಂದು ಸಾವಿರ ರೂ. ಬಹುಮಾನವನ್ನೂ ನೀಡಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಸಿಕ್ಕ ಹಣವನ್ನು ಸಿಐಎಸ್‌ಎಫ್ ಇನ್ಸ್‌ಪೆಕ್ಟರ್ ಅವರು ಡ್ಯೂಟಿ ಟರ್ಮಿನಲ್ ಮ್ಯಾನೇಜರ್ ಅವರ ಕಚೇರಿಯಲ್ಲಿ ಇರಿಸಿದ್ದು, ನಿಜವಾಗಿಯೂ ಹಣ ಯಾರಿಗೆ ಸೇರಿದ್ದು ಎಂಬುದರ ಕುರಿತು ಕೂಲಂಕಷವಾಗಿ ವಿಚಾರಣೆ ನಡೆಸಲಾಗುತ್ತಿದೆ. ಕೂಡಲೇ ಹಣ ಕಳೆದುಕೊಂಡವರಿಗೆ ಅದನ್ನು ತಲುಪಿಸಲು ಕ್ರಮ ತೆಗೆದುಕೊಳ್ಳಲಾಗುತ್ತದೆ. ಇನ್ನು ಹಣ ಮರಳಿಸಿದ ಮಾಸಿ ಉಲ್ಲಾ ಖಾನ್ ಅವರ ಪ್ರಾಮಾಣಿಕತೆಯನ್ನು ವಿಮಾನ ನಿಲ್ದಾಣದ ಅಧಿಕಾರಿಗಳು ಹಾಗೂ ಸಹೋದ್ಯೋಗಿಗಳು ಮುಕ್ತ ಕಂಠದಿಂದ ಕೊಂಡಾಡಿದ್ದಾರೆ.