ಮುಂಬಯಿಯ ದಾದರ್‌ನಲ್ಲಿ ವೇತನ ಕೇಳಿದ ಎಂಬ ಕಾರಣಕ್ಕೆ 18 ವರ್ಷದ ಹುಡುಗನೊಬ್ಬನನ್ನು ಆತನ ಉದ್ಯೋಗದಾತರೇ ಕೊಲೆ ಮಾಡಿದ್ದಾರೆ ಎಂದು ಮೃತನ ತಂದೆ ಆಪಾದನೆ ಮಾಡಿದ್ದಾರೆ. ಇಲ್ಲಿನ ಎನ್‌ಎಂ ಜೋಶಿ ಮಾರ್ಗ್ ಪೊಲೀಸ್ ಠಾಣೆಯು ಇದೊಂದು ಆಕಸ್ಮಿಕ ಸಾವೆಂದು ವರದಿ ಮಾಡಿಕೊಂಡಿದೆ.
ಪೊಲೀಸ್ ದೂರು ನೀಡಲು ಹೋದ ಹುಡುಗನ ತಂದೆ ರಾಮ್‌ರಾಜ್ ಜೈಸ್ವಾರ್, ಇಲ್ಲಿನ ನಾಯರ್ ಆಸ್ಪತ್ರೆಯಲ್ಲಿ ತಮ್ಮ ಪುತ್ರನ ದೇಹ ಕಂಡಿದ್ದು, ತಲೆ ಬೋಳಿಸಿ ಬೂದಿ ಮೆತ್ತಲಾಗಿತ್ತು ಎಂದು ತಿಳಿಸಿದ್ದಾರೆ. ಇದೊಂದು ಆಕಸ್ಮಿಕ ಸಾವೆಂದು ವರದಿ ಮಾಡಿಕೊಳ್ಳಲಾಗಿರುವುದಾಗಿ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಸುನೀಲ್ ಚಂದ್ರಮೋರೆ ತಿಳಿಸಿದ್ದಾರೆ.
ಪ್ರಭಾದೇವಿಯ ಕಾಮ್‌ಗಾರ್ ನಗರದಲ್ಲಿ ಮೃತ ಪಂಕಜ್ ತನ್ನ ತಂದೆಯೊಂದಿಗೆ 2022ರಿಂದ ವಾಸಿಸುತ್ತಿದ್ದರು. ಟೂರ್ & ಟ್ರಾವೆಲ್ ಕಂಪನಿಯೊಂದರಲ್ಲಿ ರಾಮ್‌ರಾಜ್ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ವಾರಣಾಸಿಯಿಂದ ಮುಂಬಯಿಗೆ ಬಂದ ತಮ್ಮ ಪುತ್ರ ಹತ್ತಿರದ ಕಿರಾಣಿ ಅಂಗಡಿಯೊಂದರಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದು, ಆತನಿಗೆ ಮಾಸಿಕ 12,000 ರೂಗಳ ವೇತನ ನೀಡುವುದಾಗಿ ತಿಳಿಸಲಾಗಿತ್ತು ಎಂದು ರಾಮ್ ರಾಜ್ ತಿಳಿಸಿದ್ದಾರೆ.
ಆರು ತಿಂಗಳ ಕಾಲ ಸಂಬಳ ಕೊಡದ ಕಾರಣ ಈ ಕೆಲಸ ಬಿಟ್ಟ ಪಂಕಜ್‌ನನ್ನು ಮಾರ್ಚ್‌ನಲ್ಲಿ ಅದೇ ಅಂಗಡಿಯ ಮಾಲಿಕನ ಸಹೋದರ ಭೇಟಿ ಮಾಡಿ ತನ್ನ ಪಾನ್ ಅಂಗಡಿಯಲ್ಲಿ ಕೆಲಸ ಮಾಡಲು ಕೋರಿದ್ದಾನೆ. ಈ ಕೆಲಸಕ್ಕೆ ಒಪ್ಪಿದ ಪಂಕಜ್, ತನ್ನ ಹಿಂದಿನ ಆರು ತಿಂಗಳ ಸಂಬಳದ ಬಾಕಿ ಕೊಡಲು ಕೇಳಿದ್ದಾನೆ.
ಹೀಗೆ ಸಂಬಳ ಕೇಳುತ್ತಲೇ ಇದ್ದ ಕಾರಣ ಕಿರಾಣಿ ಅಂಗಡಿ, ಪಾನ್ ಅಂಗಡಿಯ ಮಾಲೀಕರು ತಮ್ಮ ಸಹಚರನೊಂದಿಗೆ ಸೇರಿಕೊಂಡು ಆತನ ಮೇಲೆ ದಾಳಿ ಎಸಗಿದ್ದಾರೆ ಎಂದು ರಾಮ್‌ರಾಜ್ ತಿಳಿಸಿದ್ದಾರೆ.
ಮೊದಲಿಗೆ ತಮ್ಮ ಮಗನನ್ನು ಕ್ಷೌರಿಕನ ಅಂಗಡಿಗೆ ಕರೆದೊಯ್ದು, ಆತನ ತಲೆ ಬೋಳಿಸಿ, ಆತನ ಮುಖ ಹಾಗೂ ತಲೆಗೆ ಬೂದಿ ಸವರಿದ್ದಾರೆ. ಇದಾದ ಬಳಿಕ ಆತನ ಬಟ್ಟೆ ಬಿಚ್ಚಿ, ಬೀದಿಗಳಲ್ಲಿ ಸುತ್ತಿಸಿದ್ದಾರೆ ಎಂದು ಮಗನ ಅಂತ್ಯಕ್ರಿಯೆ ಮುಗಿಸಿ ಬಂದ ರಾಮ್‌ರಾಜ್ ಪೊಲೀಸರಿಗೆ ಕೊಟ್ಟ ದೂರಿನಲ್ಲಿ ತಿಳಿಸಿದ್ದಾರೆ.